ಬಾವಿಯಿಂದ ಮೇಲಕ್ಕೆತ್ತಿ ಪ್ರಾಣ ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿಗೆ ಈ ವ್ಯಕ್ತಿ ಮಾಡಿದ್ದೇನು ಗೊತ್ತೇ?
ಮೂಡುಬಿದಿರೆ, ಆ.16: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ವ್ಯಕ್ತಿಯನ್ನು ಮೂಡುಬಿದಿರೆ ಅಗ್ನಿಶಾಮಕ ಸಿಬ್ಬಂದಿ ಬಾವಿಗಿಳಿದು ಹರಸಾಹಸದಿಂದ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಕಡಂದಲೆಯಲ್ಲಿ ಮಂಗಳವಾರ ನಡೆದಿದೆ.
ಕಡಂದಲೆ ಬಿ.ಟಿ. ರೋಡ್‌ನ ಕಿಲೆಂಬಿ ದರ್ಖಾಸು ರುಕ್ಕಯ್ಯ ಪೂಜಾರಿ ಎಂಬವರ ಪುತ್ರ ಪುರುಷೋತ್ತಮ (42) ಎಂಬವರು ತಮ್ಮ ಮನೆಯ ಬಳಿ ಇದ್ದ 40 ಅಡಿ ಆಳದ 20-25 ಅಡಿ ನೀರಿದ್ದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ತಕ್ಷಣ ಮನೆಯವರು ಮತ್ತು ಪರಿಸರದ ಜನರು ಸೇರಿ ಪುರುಷೋತ್ತಮ್ ಅವರನ್ನು ಮೇಲಕ್ಕೆತ್ತಲು ಬಾವಿಗೆ ಹಗ್ಗವನ್ನು ಇಳಿಸಿ ಯತ್ನಿಸಿದ್ದರು. ಆದರೆ ಸ್ವಲ್ಪ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದ ಅವರು ಮೇಲಕ್ಕೆ ಬರಲು ಒಪ್ಪುತ್ತಿರಲಿಲ್ಲ. ನಂತರ ಮೂಡುಬಿದಿರೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ಕುಮಾರ್ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮನೋಹರ್ ಬಾವಿಗಿಳಿದು ಮೇಲಕ್ಕೆತ್ತಲು ಯತ್ನಿಸಿದಾಗ ಬಾವಿಯಲ್ಲೇ ಪುರುರೋತ್ತಮ ಅವರು ಸಿಬ್ಬಂದಿಗೆ ಹೊಡೆದಿದ್ದರು.
ನಂತರ ಇನ್ನಿಬ್ಬರು ಅಗ್ನಿಶಾಮಕ ಸಿಬ್ಬಂದಿ ಸತೀಶ್ ಮತ್ತು ಕೃಷ್ಣ ನಾಯ್ಕಿ ಅವರ ಸಹಕಾರದಿಂದ ಮನೋಹರ ಅವರು ಹರಸಾಹಸದಿಂದ ಹಗ್ಗದ ಪುರುಷೋತ್ತಮರನ್ನು ಮೇಲಕ್ಕೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪುರುಷೋತ್ತಮ್ ಅವರು ಬಾವಿಯಿಂದ ಮೇಲಕ್ಕೆ ಬಂದ ಮೇಲೂ ತನ್ನನ್ನು ಯಾಕೆ ಬಾವಿಯಿಂದ ಮೇಲಕ್ಕೆತ್ತಿದಿರೆಂದು ಬೈದು ಮತ್ತೆ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಸ್ಥಳಕ್ಕೆ ನೀಡಿದರು. ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಪ್ರವೀಣ್, ಸಿಬ್ಬಂದಿ ಕೇಶವ ಮತ್ತು ಕುಮಾರ್ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದರು. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.