×
Ad

ಆತ್ಮರಕ್ಷಣೆಗಾಗಿ ಕೊಲೆ: ಮಗಳ ಕೃತ್ಯದ ಬಗ್ಗೆ ರಾಜೇಶ್ವರಿಯ ತಾಯಿ ಸಮರ್ಥನೆ

Update: 2016-08-16 21:18 IST

ಉಡುಪಿ, ಆ.16: ಭಾಸ್ಕರ್ ಶೆಟ್ಟಿಯ ಹಿಂಸೆಯಿಂದ ಬೇಸತ್ತು ಹಾಗೂ ತಮ್ಮ ಆತ್ಮರಕ್ಷಣೆಗಾಗಿ ನನ್ನ ಮಗಳು ರಾಜೇಶ್ವರಿ ಹಾಗೂ ಮೊಮ್ಮಗ ನವನೀತ್ ಈ ರೀತಿಯ ಕೃತ್ಯ ನಡೆಸಿರಬಹುದು. ಇಂತಹ ಸಂದರ್ಭದಲ್ಲಿ ನಾನು ಇದ್ದರೂ ಅದನ್ನೇ ಮಾಡುತ್ತಿದ್ದೆ ಎಂದು ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ತಾಯಿ ಸುಮತಿ ಶೆಟ್ಟಿ ಹೇಳಿದ್ದಾರೆ.

ಈವರೆಗೆ ಬೆಂಗಳೂರಿನ ತನ್ನ ಮಗಳ ಮನೆಯಲ್ಲಿದ್ದ ಸುಮತಿ ಶೆಟ್ಟಿ ಎರಡು ದಿನಗಳ ಹಿಂದೆ ಊರಿಗೆ ಆಗಮಿಸಿದ್ದು, ಇಂದು ಉಡುಪಿಯಲ್ಲಿ ಸುದ್ದಿಗಾರ ರೊಂದಿಗೆ ಈ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ಭಾಸ್ಕರ್ ಶೆಟ್ಟಿಗೆ ಕಾರ್ಕಳದ ಬಂಟ ಸಮುದಾಯದ ವಿವಾಹಿತೆ ನರ್ಸ್‌ಳೊಂದಿಗೆ ಅಕ್ರಮ ಸಂಬಂಧ ಇತ್ತು. ಅವಳಿಗೆ 20ವರ್ಷದ ಗಂಡು ಮಗ ಹಾಗೂ ಮೂರು ವರ್ಷದ ಹೆಣ್ಣು ಮಗು ಇದೆ. ಇದರಲ್ಲಿ ಹೆಣ್ಣು ಮಗು ಭಾಸ್ಕರ್ ಶೆಟ್ಟಿಯದ್ದು. ಭಾಸ್ಕರ್ ಶೆಟ್ಟಿ ಆಕೆಯನ್ನು ಸೌದಿಗೆ ಕರೆಸಿಕೊಂಡಿದ್ದನು. ಮೊದಲು ಸೌದಿಯಲ್ಲಿದ್ದ ರಾಜೇಶ್ವರಿ ಹಾಗೂ ನವನೀತ್‌ನನ್ನು ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲಿನ ವಿವಾದದ ಬಳಿಕ ವೀಸಾ ರದ್ದುಗೊಳಿಸಿ ಊರಿನಲ್ಲೇ ಇರುವಂತೆ ಮಾಡಿದ. ಅದರ ನಂತರ ನರ್ಸ್‌ಳನ್ನು ಅಲ್ಲಿಗೆ ಕರೆಸಿದ್ದನು. ನರ್ಸ್ ವಿಚಾರದಲ್ಲಿ ರಾಜೇಶ್ವರಿಗೆ ವಿಚ್ಛೇದನ ಕೊಡುವಂತೆ ಒತ್ತಡ ಹಾಕುತ್ತಿದ್ದ ಭಾಸ್ಕರ್ ಶೆಟ್ಟಿ, ಇಲ್ಲದಿದ್ದರೆ ನಿಮ್ಮಿಬ್ಬ್ಬರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ವಿಚಾರದಲ್ಲಿ ತಾಯಿ ಮಗನಿಗೆ ಆತ ಹಲವು ಬಾರಿ ಹೊಡೆದಿದ್ದಾನೆ. ನಿಮಗೆ ಇಬ್ಬರಿಗೆ ಆಸ್ತಿ ಇಲ್ಲ, ನೀವು ಇನ್ನು ಐದು ಸೆಂಟ್ಸ್‌ನಲ್ಲಿ ಹೋಗಿ ವಾಸ ಮಾಡಬೇಕು ಎಂದು ಹೇಳುತ್ತಿದ್ದ. ಅಲ್ಲದೆ ಎಲ್ಲ ಆಸ್ತಿಯನ್ನು ನರ್ಸ್ ಹೆಸರಿಗೆ ಮಾಡಲು ಭಾಸ್ಕರ್ ಶೆಟ್ಟಿ ವಕೀಲರನ್ನು ಸಂಪರ್ಕಿಸಿ ಸಿದ್ಧತೆ ನಡೆಸಿದ್ದ ಎಂದು ಅವರು ಆರೋಪಿಸಿದ್ದಾರೆ.

ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇರುವ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲಿನ ವಿವಾದದ ಬಳಿಕ ನನಗೂ ನನ್ನ ಮಗಳಿಗೂ ಯಾವುದೇ ಸಂಪರ್ಕ ಇಲ್ಲ. ಅದರ ನಂತರ ನನ್ನ ಮಗಳು ಹಾಗೂ ಮೊಮ್ಮಗನನ್ನು ನಾನು ನೋಡಿಯೂ ಇಲ್ಲ ಮಾತನಾಡಿಸಿಯೂ ಇಲ್ಲ. ಈ ಬಗ್ಗೆ ಪೊಲೀಸರು ಫೋನು ವಿವರ ತೆಗೆದುಬೇಕಾದರೆ ನೋಡಬಹುದು. ಅವಳ ಯಾವುದೇ ಕಾರ್ಯಕ್ರಮಕ್ಕೆ ನಾವು ಹೋಗಿಲ್ಲ, ನಮ್ಮ ಯಾವುದೇ ಕಾರ್ಯಕ್ರಮಕ್ಕೆ ಅವಳು ಬಂದಿಲ್ಲ ಎಂದು ಅವರು ತಿಳಿಸಿದರು.

ಹೋಮಕುಂಡದ ಬಳಿ ಇಟ್ಟಿಗೆ ಇಟ್ಟು ಸುಟ್ಟಿದ್ದೇನೆ, ಅದು ಕೂಡ ವಿಧಿ ಪ್ರಕಾರ ಮಗನಿಂದ ಬೆಂಕಿ ಕೊಡಿಸಿದ್ದೇನೆ. ಅಲ್ಲದೆ ಭಸ್ಮವನ್ನು ನೀರಿಗೆ ಹಾಕಿದ್ದೇನೆ ಎಂದು ರಾಜೇಶ್ವರಿ ಹೇಳಿಕೊಂಡಿದ್ದಾಳೆ. ಅವರು ತಪ್ಪು ಮಾಡಿದರೆ ಕೋರ್ಟ್ ಶಿಕ್ಷೆ ಕೊಡುತ್ತದೆ. ಕೋರ್ಟ್‌ನಲ್ಲಿ ಶಿಕ್ಷೆ ಆಗದಿದ್ದರೂ ದೇವರ ಕೋರ್ಟ್‌ನಿಂದ ಯಾರಿಗೂ ತಪ್ಪಿಸಿಕೊಳ್ಳಲು ಆಗಲ್ಲ. ಈಗ ಗುಲಾಬಿ ಶೆಡ್ತಿ ಧೂಮಾವತಿ ದೈವದ ಮೋರೆ ಹೋಗಿದ್ದಾರೆ. ನಾನು ಕೇಳ್ತಾ ಇದ್ದೇನೆ, ನನ್ನ ಮಗಳಿಗೆ ಆ ಮನೆಯಲ್ಲಿ ಇಷ್ಟು ಹಿಂಸೆ ಕೊಡುತ್ತಿರುವಾಗ ಆ ಧೂಮವತಿ ಎಲ್ಲಿ ಇದ್ದ ಎಂದು. ಈ ಪ್ರಕರಣದಲ್ಲಿ ನನ್ನ ಎಲ್ಲ ಮಕ್ಕಳ ಹೆಸರನ್ನು ಕೊಡಲಾಗಿದೆ. ಇದು ನ್ಯಾಯವಲ್ಲ ಎಂದು ಅವರು ಸುದ್ದಿಗಾರರ ಜೊತೆ ಮಾತನಾಡುತ್ತ ಹೇಳಿದರು.

ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ನಾವು ಪೊಲೀಸರೊಂದಿಗೆ ಶಾಮೀಲಾಗಿ ಹಣ ಹಂಚಿಕೆ ಮಾಡಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವ ಸಂಬಂಧಿ ಬಾಲಕೃಷ್ಣ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರು ಯಾವುದೇ ಸಂದರ್ಭದಲ್ಲೂ ತನಿಖೆ ಕರೆದರೂ ನಾನು ಬರುತ್ತೇನೆ. ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧ. ನಮ್ಮ ಬಗ್ಗೆ ಮಾಡುತ್ತಿರುವ ಅಪಪ್ರಚಾರದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಪೊಲೀಸರು ಈವರೆಗೆ ನಮ್ಮನ್ನು ಯಾವುದೇ ವಿಚಾರಣೆಗೆ ಕರೆದಿಲ್ಲ. ಕರೆದರೆ ಖಂಡಿತ ಹೋಗುತ್ತೇನೆ ಎಂದರು.

‘ಪೊಲೀಸರು ಬಂದಾಗ ರಾಜೇಶ್ವರಿ ನನ್ನ ಪತಿಗೆ ಕರೆ ಮಾಡಿದ್ದಳು’

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಗೆ ಬಂದಾಗ ರಾಜೇಶ್ವರಿ ನನ್ನ ಪತಿ ಭಾಸ್ಕರ್ ಶೆಟ್ಟಿಗೆ ಮೊಬೈಲ್ ಕರೆ ಮಾಡಿ, ಇಲ್ಲಿ ಪೊಲೀಸರು ಬಂದು ನಮಗೆ ತೊಂದರೆ ಕೊಡುತ್ತಿದ್ದಾರೆ. ನೀವು ಬನ್ನಿ ಅಂತ ಹೇಳಿದ್ದಳು. ಆದರೆ ಅವರು ಆಗ ಕಾರವಾರದಲ್ಲಿದ್ದರು. ಅದು ಬಿಟ್ಟರೆ ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ದೊಡ್ಡಣಗುಡ್ಡೆಯ ಭಾಸ್ಕರ್ ಶೆಟ್ಟಿಯ ಪತ್ನಿ, ರಾಜೇಶ್ವರಿಯ ಸಹೋದರಿ ರೂಪಾ ಶೆಟ್ಟಿ ತಿಳಿಸಿದ್ದಾರೆ.

‘ನಾವು ಐದು ಮಂದಿ ಸಹೋದರಿಯರು. ಆದರೆ ರಾಜೇಶ್ವರಿ ಕುಟುಂಬದೊಂದಿಗೆ ನಮಗೆ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಸಂಪರ್ಕ ಇಲ್ಲ. ನನ್ನ ಪತಿ ಭಾಸ್ಕರ್ ಶೆಟ್ಟಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಗಳು ಕೇಳಿಬರುತ್ತಿವೆ. ಇದರಲ್ಲಿ ಸತ್ಯಾಂಶವಿಲ್ಲ. ನನ್ನ ಪತಿ ಯಾವುದರಲ್ಲೂ ಇಲ್ಲ. ನಾವು ಯಾವುದೇ ತನಿಖೆಗೆ ಸಿದ್ಧ. ನಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಅವರು ಮಂಗಳವಾರ ಮಾಧ್ಯಮದವರ ಮುಂದೆ ಹೇಳಿಕೊಂಡರು.

ರಾಜೇಶ್ವರಿ ಒಬ್ಬಳು ಮಾಡಿದ ಕೃತ್ಯಕ್ಕೆ ಇಡೀ ಕುಟುಂಬ ನೋವು ಅನು ಭವಿಸುವಂತಾಗಿದೆ. ಇದು ನ್ಯಾಯವಲ್ಲ. ನಮಗೆ ಅನ್ಯಾಯ ಆಗುತ್ತಿದೆ ಎಂದ ಅವರು, ಮೃತ ಭಾಸ್ಕರ್ ಶೆಟ್ಟಿಯ 200ಕೋಟಿ ರೂ. ಆಸ್ತಿಯಲ್ಲಿ 35ಕೋಟಿ ಆಸ್ತಿ ರಾಜೇಶ್ವರಿ ಹೆಸರಿನಲ್ಲಿದೆ. ಸುಮಾರು ಐದು ಕೋಟಿ ರೂ.ನಷ್ಟು ಸಾಲ ಇದೆ. ಉಳಿದ ಆಸ್ತಿ ಎಲ್ಲಿ ಇದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿ. ಆ ಬಗ್ಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News