ಏರ್ ಇಂಡಿಯಾದಿಂದ ಮೊದಲ ಬಾರಿಗೆ ಪ್ರಾಮಾಣಿಕತೆಗಾಗಿ ಉದ್ಯೋಗಿಗೆ ಭಡ್ತಿ
ಹೊಸದಿಲ್ಲಿ, ಆ.16: ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ, ಅಪ್ರತಿಮ ಪ್ರಾಮಾಣಿಕತೆ ಹಾಗೂ ವೃತ್ತಿಪರ ಸಮಗ್ರತೆ ತೋರಿಸಿದ ಕಾರಣಕ್ಕಾಗಿ ತನ್ನ ಭದ್ರತಾ ಸಿಬ್ಬಂದಿ ಯೊಬ್ಬನಿಗೆ ನಿಯಮಾವಳಿ ಸಡಿಲಿಸಿ ಭಡ್ತಿಯನ್ನು ನೀಡಿದೆ.
ಉದ್ಯೋಗಿಯೊಬ್ಬನಿಗೆ ‘ಪ್ರಾಮಾ ಣಿಕತೆಗಾಗಿ’ ಸರದಿಗಿಂತ ಮೊದಲೇ ಭಡ್ತಿ ನೀಡಿರುವುದು ಏರ್ ಇಂಡಿಯಾದ ಚರಿತ್ರೆಯಲ್ಲೇ ಇದು ಮೊದಲ ಬಾರಿ ಯಾಗಿದೆಯೆಂದು ವಿಮಾನ ಸಂಸ್ಥೆ ಹೇಳಿದೆ.
ಪ್ರಸ್ತುತ ವಿಮಾನ ಸಂಸ್ಥೆಯ ಭದ್ರತಾ ವಿಭಾಗದಲ್ಲಿರುವ ಸುಭಾಶ್ ಚಂದರ್ ಎಂಬವರನ್ನು ಅವರ ‘ವಿಶೇಷ ಗುಣ ನಡತೆಗಾಗಿ’ ಭದ್ರತಾಧಿಕಾರಿ ದರ್ಜೆಗೆ ಭಡ್ತಿ ನೀಡಲಾಗಿದೆ. ಏರ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೊಹಾನಿ ಈ ನಿರ್ಧಾರ ಕೈಗೊಂಡಿದ್ದಾರೆಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಆ.15ರಂದು ಸ್ವಾತಂತ್ರ ಸಮಾರಂಭದ ವೇಳೆ, ಏರ್ ಇಂಡಿಯಾದ ಭದ್ರತಾ ಕಾರ್ಯವಾಹಿ ನಿರ್ದೇಶಕ ಅಲೋಕ್ ಸಿಂಗ್ (ಐಪಿಎಸ್) ಚಂದರ್‌ರಿಗೆ ಭದ್ರತಾಧಿಕಾರಿ ದರ್ಜೆಯ ಪಟ್ಟಿಗಳನ್ನು ತೊಡಿಸಿ ಗೌರವಿಸಿದ್ದಾರೆಂದು ಏರ್ ಇಂಡಿಯಾ ಹೇಳಿದೆ.
ವಿಜ್ಞಾನ ಪದವಿಧರನಾಗಿದ್ದು, ವಿಮಾನ ಯಾನ ಭದ್ರತೆಯ ಕುರಿತು ಹಲವು ಕೋರ್ಸ್‌ಗಳನ್ನು ಮಾಡಿರುವ ಚಂದರ್, ಹಲವು ಸಲ ಪ್ರಯಾಣಿಕರು ವಿಮಾನದಲ್ಲೇ ಮರೆತು ಹೋದ ಬೆಲೆ ಬಾಳುವ ವಸ್ತಗಳು ಹಾಗೂ ನಗದನ್ನು ಮರಳಿಸಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲಿ ಪ್ರಯಾ ಣಿಕರಿಗೆ ಅದನ್ನು ಹಿಂದಿರುಗಿಸುವವರೆಗೆ ಅವರಿಗೆ ಅದನ್ನು ಕಳೆದು ಕೊಂಡಿರುವುದೇ ಗಮನಕ್ಕೆ ಬಂದಿರಲಿಲ್ಲವೆಂದು ಅದು ತಿಳಿಸಿದೆ.
ಈ ವರ್ಷ ಜೂನ್‌ನಲ್ಲಿ ವಿಮಾನ ತಪಾಸಣೆಯ ವೇಳೆ ರೂ. 5 ಲಕ್ಷ ವೌಲ್ಯದ ವಿದೇಶಿ ಹಣದ ಚೀಲ ಹಾಂಕಾಂಗ್‌ನಿಂದ ಬಂದ ವಿಮಾನದಲ್ಲಿ ಚಂದರ್‌ಗೆ ದೊರಕಿತ್ತು. ಅದನ್ನವರು ಪ್ರಯಾಣಿಕನಿಗೆ ಮರಳಿಸಿದ್ದರು. ಅದೇ ರೀತಿ 2003ರ ಆಗಸ್ಟ್‌ನಲ್ಲಿ ಸೌದಿ ಅರೇಬಿಯದಿಂದ ಬಂದಿದ್ದ ಭೋಪಾಲ್‌ನ ಪ್ರಯಾಣಿಕನೊಬ್ಬನ ಚಿನ್ನಾಭರಣಗಳನ್ನು ಹಿಂದಿರುಗಿಸಿದ್ದರು.
ಚಂದರ್, ಏರ್ ಇಂಡಿಯಾದಲ್ಲಿ 29 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.