ಮಹಿಳೆಗೆ ಬೆದರಿಕೆ: ಆರೋಪಿ ಪೊಲೀಸ್ ವಶ
ಉಪ್ಪಿನಂಗಡಿ, ಆ.16: ಇಲ್ಲಿನ ರಾಮನಗರ ಕುದ್ಲೂರು ಎಂಬಲ್ಲಿ ಮನೆಗೆ ಬಂದು ಮನೆಯೊಡತಿಗೆ ಚೂರಿ ತೋರಿಸಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಕುದ್ಲೂರು ನಿವಾಸಿ ಅಯ್ಯೂಬ್ ಎಂಬವರ ಮನೆಗೆ ಸೋಮವಾರ ಬೆಳಗ್ಗೆ ಬಂದ ಹಿಂದಿ ಭಾಷಿಗ ವ್ಯಕ್ತಿಯೋರ್ವ ಮನೆಯೊಡತಿ ಬಾಗಿಲು ತೆರೆದಾಕ್ಷಣ ಚೂರಿಯನ್ನು ತೋರಿಸಿ ಮನೆಯೊಳಗೆ ನುಗ್ಗಿ, ಹಿಂದಿಯಲ್ಲೇ ಬೆದರಿಕೆಯೊಡ್ಡಿದ್ದ. ಮನೆಯೊಳಗಿದ್ದ ಅಯ್ಯೂಬ್ ಹೊರಗೆ ಬರುವುದನ್ನು ನೋಡುತ್ತಲೇ ಪಲಾಯನ ಗೈದಿದ್ದನು. ಈ ಸಂದರ್ಭ ಅಯ್ಯೂಬ್ ಆತನನ್ನು ಬೆನ್ನಟ್ಟಿದ್ದಾಗ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ, ಓಡುವಾಗ ಆತನ ಬ್ಯಾಗ್ ಮತ್ತು ಮೊಬೈಲ್ ಕೆಳಗೆ ಬಿದ್ದಿತ್ತು. ಇದನ್ನು ವಶಪಡಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರು ಮೊಬೈಲ್‌ನ ಆಧಾರದಲ್ಲಿ ಆರೋಪಿಯ ಜಾಡು ಹಿಡಿದು ಓರ್ವನನ್ನು ಬಂಧಿಸಿ ವಿಚಾರಿಸಿದ್ದಾರೆ. ಈ ಸಂದಭರ್ ಆತನೊಂದಿಗೆ ಇನ್ನಿಬ್ಬರು ಇದ್ದರೆಂದು ತಿಳಿದು ಬಂದಿದೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.