ಅಮೆರಿಕ, ಯುರೋಪ್‌ಗಳ ಬೆಂಬಲ ಕೋರಿದ ಬಲೂಚ್ ಆಂದೋಲನ ನಾಯಕರು

Update: 2016-08-16 18:23 GMT

ವಾಶಿಂಗ್ಟನ್, ಆ. 16: ಪ್ರಧಾನಿ ನರೇಂದ್ರ ಮೋದಿ ನೀಡಿರುವ ಬೆಂಬಲದಿಂದ ಉತ್ತೇಜಿತರಾಗಿರುವ ಇಲ್ಲಿನ ಬಲೂಚ್ ರಾಷ್ಟ್ರೀಯ ಆಂದೋಲನದ ನಾಯಕರು, ‘‘ದಮನಕಾರಿ ಪಾಕಿಸ್ತಾನಿ ಆಡಳಿತ’’ದ ವಿರುದ್ಧ ಅಮೆರಿಕ ಮತ್ತು ಯುರೋಪ್‌ಗಳ ಬೆಂಬಲವನ್ನು ಕೋರಿದ್ದಾರೆ.

‘‘ಪಾಕಿಸ್ತಾನವು ಧಾರ್ಮಿಕ ಭಯೋತ್ಪಾದನೆಯನ್ನು ಸರಕಾರಿ ನೀತಿಯನ್ನಾಗಿ ಬಳಸುತ್ತಿರುವುದು ದೂರಗಾಮಿ ಪರಿಣಾಮಗಳನ್ನು ಹೊಂದಿದೆ ಎಂಬುದನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು. ಭಯೋತ್ಪಾದನೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ, ಆದರೆ ಅದನ್ನು ಪರಿಣಾಮಕಾರಿಯಾಗಿ ಎದುರಿಸಬೇಕು’’ ಎಂದು ಬಲೂಚ್ ರಾಷ್ಟ್ರೀಯ ಆಂದೋಲನದ ಅಧ್ಯಕ್ಷ ಖಲೀಲ್ ಬಲೂಚ್ ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಪ್ರಧಾನಿ ನರೇಂದ್ರ ಮೋದಿಯ ಸಾಲಿಗೆ ಅಮೆರಿಕ ಮತ್ತು ಯುರೋಪ್ ದೇಶಗಳೂ ಸೇರುತ್ತವೆ ಹಾಗೂ ಬಲೂಚಿಸ್ತಾನವನ್ನು ಪಾಕಿಸ್ತಾನ ಆಕ್ರಮಿಸಿದಂದಿನಿಂದ 68 ವರ್ಷಗಳ ಕಾಲ ಅಲ್ಲಿ ನಡೆಯುತ್ತಾ ಬಂದಿರುವ ಮಾನವತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧಾಪರಾಧಗಳಿಗಾಗಿ ಪಾಕಿಸ್ತಾನವನ್ನು ಹೊಣೆ ಮಾಡುತ್ತವೆ ಎಂಬ ವಿಶ್ವಾಸವನ್ನು ಬಲೂಚ್ ದೇಶ ಹೊಂದಿದೆ’’ ಎಂದು ಬಲೂಚ್ ತಿಳಿಸಿದರು.

ಬಲೂಚಿಸ್ತಾನದ ಬಗ್ಗೆ ಮೋದಿ ಹೊಂದಿರುವ ನಿಲುವನ್ನು ಸ್ವಾಗತಿಸಿದ ಅವರು, ‘‘ಆಕ್ರಮಿತ ಬಲೂಚಿಸ್ತಾನದಲ್ಲಿ ಜನಾಂಗೀಯ ಸರ್ವನಾಶದ ಗುರಿಯನ್ನು ಹೊಂದಿರುವ ಪಾಕಿಸ್ತಾನವು ಅಲ್ಲಿ ನಡೆಸುತ್ತಿರುವ ಯುದ್ಧಾಪರಾಧಗಳನ್ನು ನಿರ್ಲಕ್ಷಿಸುವ ಧೋರಣೆ ಆತಂಕಕಾರಿಯಾಗಿದೆ’’ ಎಂದರು.

‘‘ಬಲೂಚಿಸ್ತಾನದ ಬಗ್ಗೆ ಭಾರತೀಯ ಪ್ರಧಾನಿ ನೀಡಿರುವ ಹೇಳಿಕೆ ಧನಾತ್ಮಕ ಬೆಳವಣಿಗೆಯಾಗಿದೆ’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News