ಕೋಟಿ ಖರ್ಚು ಮಾಡಿ ರಿಯೋಗೆ ಹೋಗಿ ಬೀಚಲ್ಲಿ ಕಳೆದ ಹರ್ಯಾಣ ಸಚಿವ
ಚಂಡೀಗಢ, ಆ.17: ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ತಂಡದೊಂದಿಗೆ ಹೋಗಿದ್ದ ಹರ್ಯಾಣದ ಸಚಿವ ಅನಿಲ್ ವಿಜ್ ಬುಧವಾರ ತಮ್ಮ ರಾಜ್ಯದ ಆಟಗಾರರು ಭಾಗವಹಿಸಿದ್ದ ಸ್ಪರ್ಧೆಯ ಸಂದರ್ಭ ಕ್ರೀಡಾಂಗಣದಲ್ಲಿ ಗೈರಾಗಿದ್ದು, ಸಾಕಷ್ಟು ಟೀಕೆಗಳನ್ನು ಆಹ್ವಾನಿಸಿಕೊಂಡಿದ್ದಾರೆ. ಬ್ರೆಝಿಲ್‌ಗೆ ಹೋಗುವ ಮುನ್ನ ಟ್ವೀಟ್ ಮಾಡಿದ್ದ ಈ ಸಚಿವ ತಾನು ‘‘ಒಲಿಂಪಿಕ್ಸ್‌ಗೆ ಹರ್ಯಾಣದ ಆಟಗಾರರನ್ನು ಪ್ರೋತ್ಸಾಹಿಸಲು ಹೋಗುತ್ತಿರುವುದಾಗಿ ಹೇಳಿದ್ದರು.
ರವಿವಾರ ಈ 63 ವರ್ಷದ ಸಚಿವ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಾನು ಆಟಗಾರರಿಗೆ ಬೆಂಬಲವಾಗಿ ನಿಲ್ಲಲು ಹಾಗೂ ಅವರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದಾಗಿ ಹೇಳಿದ್ದರು. ಆದರೆ ಎನ್‌ಡಿಟಿವಿ ವರದಿಯೊಂದರ ಪ್ರಕಾರ ಹರ್ಯಾಣದ ನಿಯೋಗವು ರಾಜ್ಯದ ಪೊಲೀಸ್ ಅಧಿಕಾರಿ ವಿಕಾಸ್ ಕೃಷ್ಣನ್ ಅವರು ಭಾಗವಹಿಸಿದ್ದ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಹಾಗೂ ಡಿಸ್ಕಸ್ ಆಟಗಾರ್ತಿ ಸೀಮಾ ಪೂನಿಯ ಹಾಗೂ ಕುಸ್ತಿಪಟು ರವೀಂದರ್ ಖತ್ರಿಯವರ ಸ್ಪರ್ಧೆಯ ಸಂದರ್ಭ ಹಾಜರಿರಲೇ ಇಲ್ಲ.ಹರ್ಯಾಣದ ಕುಸ್ತಿಪಟು ಹರ್ದೀಪ್ ಸಿಂಗ್ ಸ್ಪರ್ಧೆಯನ್ನೂ ಅವರು ವೀಕ್ಷಿಸಿಲ್ಲ.
ಹಿಂದುಸ್ತಾನ್ ಟೈಮ್ಸ್ ವರದಿ ಪ್ರಕಾರ ಹರ್ಯಾಣದ ನಿಯೋಗ ಮಂಗಳವಾರ ಹೆಚ್ಚಿನ ಸಮಯದಲ್ಲಿ ತಮ್ಮ ಬೀಚ್ ಹೊಟೇಲಿನಲ್ಲೇ ಇತ್ತು ಅಥವಾ ನಗರ ಸುತ್ತಾಡಲು ತೆರಳಿತ್ತು. ಈ ಎಂಟು ಮಂದಿಯ ಹರ್ಯಾಣದ ನಿಯೋಗದ ಪ್ರಯಾಣ ಖರ್ಚುವೆಚ್ಚಗಳು ಬರೋಬ್ಬರಿ 1 ಕೋಟಿ ರೂ. ಎಂದು ಹೇಳಲಾಗುತ್ತಿದೆ.
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಧಿಕಾರಿಗಳು ತಪ್ಪು ಕಾರಣಗಳಿಗಾಗಿಯೇ ಸುದ್ದಿಯಾಗಿದ್ದರು. ಇತ್ತೀಚೆಗೆ ಕ್ರೀಡಾ ಸಚಿವ ವಿಜಯ್ ಗೋಯೆಲ್‌ಆಟಗಾರರಲ್ಲದವರಿಗೆ ಪ್ರವೇಶವಿಲ್ಲದ ಸ್ಥಳಗಳಿಗೆ ಪ್ರವೇಶಿಸಿ ಒಲಿಂಪಿಕ್ಸ್ ಸಮಿತಿಯಿಂದ ಟೀಕೆಗೊಳಗಾಗಿದ್ದರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.