ದೇಶದ್ರೋಹ ಕಾನೂನು ದುರ್ಬಳಕೆಯ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ
ಹೊಸದಿಲ್ಲಿ, ಆ.17: ದೇಶದಲ್ಲಿ ದೇಶದ್ರೋಹ ಕಾನೂನುಗಳ ‘ದುರಪಯೋಗ ಹಾಗೂ ತಪ್ಪು ಅನ್ವಯವನ್ನು’ ಪ್ರಶ್ನಿಸಿ, ಹಿರಿಯ ವಕೀಲ ಪ್ರಶಾಂತಭೂಷಣ್‌ರ ಎನ್‌ಜಿಒ, ಕಾಮನ್ ಕಾಸ್ ಬುಧವಾರ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದೆ.
ದೇಶದ್ರೋಹ ಕಾಯ್ದೆಯನ್ನು ಭಯ ಹುಟ್ಟಿಸುವುದಕ್ಕಾಗಿ ಮಿತಿಮೀರಿ ಬಳಸಲಾಗುತ್ತಿದೆ. ಅದರಿಂದಾಗಿ ಸಾಮಾಜಿಕ ಚಳವಳಿಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಬುದ್ಧಿಜೀವಿಗಳಿಗೆ ಹಿಂಸೆಯಾಗುತ್ತಿದೆ. ಈ ಕಾನೂನನ್ನು ಹಿಂಸೆಯಿಲ್ಲದ ಹಾಗೂ ಸಾರ್ವಜನಿಕ ಶಿಸ್ತಿಗೆ ಭಂಗ ತಾರದಂತಹ ಕಾರ್ಯಾಚರಣೆ ಹಾಗೂ ವಿರೋಧಗಳನ್ನು ದಮನಿಸುವ ಅಸ್ತ್ರವಾಗಿ ಬಳಕೆಯಾಗುತ್ತಿದೆಯೆಂದು ಪ್ರಶಾಂತ ಭೂಷಣ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆರೋಪಿಸಿದೆ.
ಬಾಕಿಯಿರುವ ಎಲ್ಲ ದೇಶದ್ರೋಹ ಪ್ರಕರಣಗಲ ಪರಾಮರ್ಷೆ ನಡೆಸುವಂತೆ ಕೋರಿರುವ ಅರ್ಜಿಯು ಅವುಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಹೆಚ್ಚಿನ ಇಂತಹ ದೇಶದ್ರೋಹದ ಆರೋಪಗಳಲ್ಲಿ ಸರಕಾರವನ್ನುರುಳಿಸಲು ಹಿಂಸಾಚಾರಕ್ಕೆ ಪ್ರಚೋದನೆಯಂತಹ ಸಂದರ್ಭಗಳೇ ಇಲ್ಲವೆಂದು ಅದು ಪ್ರತಿಪಾದಿಸಿದೆ.
ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸುವ ಮುನ್ನ ಡಿಜಿಪಿಯಿಂದ ಕಾರಣ ಸಹಿತ ಆದೇಶವನ್ನು ಅಧಿಕಾರಿಗಳು ಮಂಡಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸುವಂತೆಯೂ ಅರ್ಜಿ ನ್ಯಾಯಾಲಯವನ್ನು ಕೋರಿದೆ.