×
Ad

ಬೆಳ್ತಂಗಡಿ: ಅಟ್ರಿಂಜೆ ಕೊರಗರ ಮನೆಗಳಿಗೆ ಎಸ್ಪಿ ಭೂಷಣ್ ಜಿ. ಬೊರಸೆ ಭೇಟಿ

Update: 2016-08-17 19:34 IST

ಬೆಳ್ತಂಗಡಿ, ಆ.17: ಸುಲ್ಕೇರಿ ಗ್ರಾಮಪಂಚಾಯತ್ ವ್ಯಾಪ್ತಿಯ ಅಟ್ರಿಂಜೆ ಎಂಬಲ್ಲಿ ಅತ್ಯಂತ ದುಸ್ಥಿತಿಯಲ್ಲಿ ಟರ್ಪಾಲ್ ಅಡಿಯಲ್ಲಿ ವಾಸಿಸುತ್ತಿರುವ ಕೊರಗ ಕುಟುಂಬಗಳ ಮನೆಗಳಿಗೆ ಬುಧವಾರ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಧೈರ್ಯ ತುಂಬಿದರು.

‘ವಾರ್ತಾಭಾರತಿ’ಯು ಇಲ್ಲಿನ ಕೊರಗ ಕುಟುಂಬಗಳ ದುಸ್ತರ ಬದುಕಿನ ಬಗ್ಗೆ ಬೆಳಕು ಚೆಲ್ಲಿತ್ತು. ಇಲ್ಲಿನ ಸಮಸ್ಯೆಗಳ ಬಗ್ಗೆ ಬುಧವಾರ ಬೆಳ್ತಂಗಡಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಗಮನಸೆಳೆದ ಹಿನ್ನಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯವರು ಕೂಡಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಸುರಿಯುವ ಮಳೆಯ ನಡುವೆಯೂ ಅಪಾಯಕಾರಿಯಾದ ನದಿಯನ್ನು ತಾತ್ಕಾಲಿಕ ಮರದ ಸೇತುವೆಯ ಮೂಲಕ ದಾಟಿ ಅವರ ಮನೆಗಳಿಗೆ ತೆರಳಿದ ಎಸ್ಪಿ, ಜನರ ಸಮಸ್ಯೆಗಳನ್ನು ಆಲಿಸಿದರು. ಇಲ್ಲಿನ ಹೆಚ್ಚಿನ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲದಿರುವ ಬಗ್ಗೆ, ಮನೆ ಹಾಗೂ ಮನೆತೆರಿಗೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಗಮನಿಸಿದ ಎಸ್ಪಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಕ್ಕಾಗಿ ಜಿಲ್ಲಾಧಿಕಾರಿಯವರೊಂದಿಗೆ ಹಾಗೂ ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿ ಈ ಐದು ಕುಟುಂಬಗಳಿಗೆ ಮನೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಶಾಲೆಗೆ ಹೋಗದೆ ಮನೆಯಲ್ಲಿ ಉಳಿದಿರುವ ಬಾಲಕನಿಗೆ ವಿದ್ಯಾರ್ಥಿನಿಲಯದಲ್ಲಿ ಅವಕಾಶ ಕಲ್ಪಿಸುವುದಾಗಿಯೂ ಅವರು ತಿಳಿಸಿದರು. ಇದೀಗ ವಾಸಿಸುತ್ತಿರುವ ಪ್ರದೇಶದಲ್ಲಿ ಸರಕಾರಿ ಜಮೀನಿದ್ದು ಅದನ್ನೇ ಒದಗಿಸುವಂತೆ ಕೊರಗ ಕುಟುಂಬಗಳು ವಿನಂತಿಸಿದಾಗ ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಅಧಿಕಾರಿ ಸ್ಪಂದಿಸಲಿದ್ದಾರೆ ಎಂದು ಅವರಲ್ಲಿ ದ್ಯೆರ್ಯ ತುಂಬಿದರು.

ಈ ಸಂದರ್ಭದಲ್ಲಿ ಸುಲ್ಕೇರಿ ಗ್ರಾಮ ಪಂಚಾಯತು ಅಭಿವೃದ್ದಿ ಅಧಿಕಾರಿ ರವಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ಯ ಮುಖಂಡರು ಉಪಸ್ಥಿತರಿದ್ದರು.

ದಲಿತ ಕುಂದು ಕೊರತೆ ಸಭೆಯಲ್ಲಿ ಕೊರಗರ ದುಸ್ತರ ಬದುಕಿನ ಬಗ್ಗೆ ತಿಳಿದುಕೊಂಡ ಎಸ್ಪಿ ತಮ್ಮೆಲ್ಲ ಕಾರ್ಯಗಳನ್ನೂ ಬದಿಗೊತ್ತಿ ಅಲ್ಲಿಗೆ ಭೇಟಿ ನೀಡಿದರೆ, ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಸಂತೋಷ್‌ಕುಮಾರ್ ಮಾತ್ರ ಇದು ತನಗೆ ಸಂಬಂಧಿಸಿದ ವಿಚಾರವೇ ಅಲ್ಲ ಎಂದು ಸಭೆ ಮುಗಿಸಿ ಹಿಂದಿರುಗಿದರು. ಕೊರಗರ ಬದುಕಿನ ಬಗ್ಗೆ ಈಗಾಗಲೆ ಸಾಕಷ್ಟು ವರದಿಗಳು ಬಂದಿದ್ದರೂ ಇನ್ನೂ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಇತ್ತ ತಲೆ ಹಾಕಲೇ ಇಲ್ಲ ಎನ್ನುವುದು ಸಾರ್ವಜನಿಕರ ಆರೋಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News