×
Ad

ಸೆ.2ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ಸಿಐಟಿಯುನಿಂದ ವಾಹನ ಜಾಥಾ

Update: 2016-08-17 20:55 IST

ಉಳ್ಳಾಲ, ಆ.17: ಕಾರ್ಮಿಕ ವರ್ಗದ 17 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಸೆ.2 ರಂದು ಅಖಿಲ ಭಾರತ ಸಾರ್ವತ್ರಿಕ ಮಹಾ ಮುಷ್ಕರ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಸಿಐಟಿಯು ಸಂಘಟನೆಯು ಜಿಲ್ಲೆಯಾದ್ಯಂತ ವಾಹನ ಜಾಥಾ ನಡೆಸಿ ತೊಕ್ಕೊಟ್ಟಿನಲ್ಲಿ ಬಂದ್ ಬಗ್ಗೆ ಪ್ರಚಾರ ನಡೆಸಿತು.

ತೊಕ್ಕೊಟ್ಟಿಗೆ ಬುಧವಾರ ಆಗಮಿಸಿದ ವಾಹನ ಪ್ರಚಾರ ಜಾಥಾವನ್ನು ಉಳ್ಳಾಲವಲಯ ಸಿಐಟಿಯು ಸಂಘದ ಪದಾಧಿಕಾರಿಗಳು ಬರಮಾಡಿಕೊಂಡರು.

ಸಿಐಟಿಯು ಜಿಲ್ಲಾ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಳೆದ ಸಲದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಅಧಿಕಾರಕ್ಕೆ ಬಂದ ನಂತರ ಕೇಂದ್ರದ ಕಾರ್ಮಿಕ ಸಂಘಟನೆಗಳು ದೇಶದ ಸುಮಾರು 17 ಕೋಟಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪಟ್ಟಿ ತಯಾರಿಸಿ ಪ್ರಮುಖ 17 ಬೇಡಿಕೆಗಳನ್ನು ಮುಂದಿಟ್ಟಿತ್ತು. ಆದರೆ ನರೇಂದ್ರಮೋದಿಯವರ ಸರಕಾರವು ಒಂದೂವರೆ ವರುಷ ಪೂರೈಸಿದರೂ ಕಾರ್ಮಿಕರ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಈ ಹಿಂದಿನ ಸರಕಾರಗಳಿಗಿಂತಲೂ ತೀವ್ರವಾದ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ನಿರುದ್ಯೋಗ ಸಮಸ್ಯೆಯು ಹೆಚ್ಚಾಗಿ, ದೇಶದಲ್ಲಿ ಬಡತನ ತಾಂಡವವಾಡುತ್ತಿದ್ದರೂ ಪ್ರಧಾನಿಯವರು ಮಾತ್ರ ಭಾರೀ ಸಾಧನೆ ಮಾಡುತ್ತಿರುವುದರ ಬಗ್ಗೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರ, ಜನಸಾಮಾನ್ಯರ ಸಮಸ್ಯೆಯನ್ನು ಬದಿಗಿಟ್ಟು ವಿಶ್ವದ ಎದುರು ದೇಶದ ಶ್ರೀಮಂತಿಕೆಯನ್ನು ತೋರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಂದು ರಸ್ತೆ ಸಾರಿಗೆ ವ್ಯವಸ್ಥೆಯನ್ನೂ ದೊಡ್ಡ ಬಂಡವಾಳಶಾಹಿಗಳಿಗೆ ನೀಡಿ ಖಾಸಗೀಕರಣ ಮಾಡುವ ಮಸೂದೆಯನ್ನು ಜಾರಿಗೆಗೊಳಿಸಲು ಹೊರಟಿದ್ದಾರೆ. ಇದರಿಂದ ಸಾರಿಗೆಯಲ್ಲಿ ಕೆಲಸಮಾಡುತ್ತಿರುವ ಅದೆಷ್ಟೋ ಕಾರ್ಮಿಕರು ಬೀದಿಪಾಲಾಗಲಿದ್ದಾರೆ. ನೂತನ ರಸ್ತೆ ಸುರಕ್ಷತಾ ಮಸೂದೆಯ ಅಸಂಬದ್ಧ ಕಾನೂನನ್ನು ಜಾರಿಗೆಗೊಳಿಸಿ ಬಡ ವಾಹನ ಚಾಲಕರಿಂದ 1,000ದಿಂದ 4 ಲಕ್ಷ ರೂ.ವರೆಗೆ ದಂಡ ವಸೂಲಾತಿ ನಡೆಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಕೃಷ್ಣಪ್ಪ ಸಾಲಿಯಾನ್, ವಿಲಾಸಿನಿ ಬಬ್ಬುಕಟ್ಟೆ, ಪದ್ಮಾವತಿ ಶೆಟ್ಟಿ, ಸಂತೋಷ್ ಶಕ್ತಿನಗರ, ಯೋಗೀಶ್ ಜೆಪ್ಪು, ಜಯಂತ್ ನಾಯ್ಕು, ಹರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News