ಉಪ್ಪಿನಂಗಡಿ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ 3 ಲಕ್ಷ ರೂ. ಅನುದಾನ: ಐವನ್ ಡಿಸೋಜ
ಉಪ್ಪಿನಂಗಡಿ, ಆ.17: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಆಟೊರಿಕ್ಷಾ ತಂಗುದಾಣ ನಿರ್ಮಾಣಕ್ಕೆ 3 ಲಕ್ಷ ರೂ. ಅನುದಾನ ನೀಡುವ ಬಗ್ಗೆ ರಾಜ್ಯ ಸರಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭರವಸೆ ನೀಡಿದ್ದಾರೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಸಂದರ್ಭ ಆಟೊರಿಕ್ಷಾ ಚಾಲಕ ಮಾಲಕ-ಸಂಘದ ವತಿಯಿಂದ ನೀಡಲಾದ ಮನವಿಗೆ ಸ್ಪಂದಿಸಿ, ಬಸ್ ನಿಲ್ದಾಣದ ಬಳಿ ಇರುವ ರಿಕ್ಷಾ ತಂಗುದಾಣಕ್ಕೆ ಭೇಟಿ ನೀಡಿ ಬಳಿಕ ಸಂಘದ ಸದಸ್ಯರಿಗೆ ಭರವಸೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಆಟೊರಿಕ್ಷಾ ಚಾಲಕರು ಸೇವಾ ಮನೋಭಾವದಿಂದ ಕೆಲಸ ಮಾಡುವವರು. ಅವರೂ ಮುಖ್ಯವಾಹಿನಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಅವರ ಬೇಡಿಕೆಯನ್ನು ಆದ್ಯತೆ ನೆಲೆಯಲ್ಲಿ ಪೂರೈಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಅಬ್ದುರ್ರಹ್ಮಾನ್, ಸದಸ್ಯರಾದ ಯು.ಕೆ. ಇಬ್ರಾಹೀಂ, ಯು.ಟಿ. ತೌಶೀಫ್, ವಿನಾಯಕ ಪೈ, ಚಂದ್ರಶೇಖರ ಮಡಿವಾಳ, ರಮೇಶ್ ಭಂಡಾರಿ, ಉಮೇಶ್ ಗೌಡ, ಸ್ಥಳೀಯ ಪ್ರಮುಖರಾದ ನಝೀರ್ ಮಠ, ಮುಹಮ್ಮದ್ ಕೆಂಪಿ, ಶಬ್ಬೀರ್ ಕೆಂಪಿ, ಫ್ರೆಂಡ್ಸ್ ಆಟೊ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಬಶೀರ್, ಸ್ನೇಹ ಸಂಗಮ ಸಂಘದ ಅಧ್ಯಕ್ಷ ಅಬ್ದುಲ್ಲತೀಫ್, ಸಂಘಟನಾ ಕಾರ್ಯದರ್ಶಿ ಮಜೀದ್, ಬಿಎಂಎಸ್. ಸಂಘದ ಸುರೇಶ್ ಹಾಗೂ ರಿಕ್ಷಾ ಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.