ನಾಯಕತ್ವ ಪರಿವರ್ತಿಸಲು ರೋಟರ್ಯಾಕ್ಟ್ ಉತ್ತಮ ವೇದಿಕೆ: ಮುಹಮ್ಮದ್ ಶರೀಫ್
ಮೂಡುಬಿದಿರೆ, ಆ.17: ಯುವಜನರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಲು ಮತ್ತು ಸೇವೆಗೆ ಮಾನಸಿಕವಾಗಿ ಪರಿವರ್ತಿಸಲು ರೋಟರ್ಯಾಕ್ಟ್ ಸಹಕಾರಿಯಾಗಿದೆ. ಜತೆಗೆ ಯುವಜನರ ಶಕ್ತಿ ಮತ್ತು ಸಾಮರ್ಥ್ಯವನ್ನು ಧೀರೋದ್ಧಾತ ನಾಯಕತ್ವಕ್ಕೆ ಪರಿವರ್ತಿಸಲು ಒಂದು ವೇದಿಕೆಯಾಗಿದೆ ಎಂದು ಮೂಡುಬಿದಿರೆ ರೋಟರಿ ಕ್ಲಬ್‌ನ ಅಧ್ಯಕ್ಷ ಮುಹಮ್ಮದ್ ಶರೀಫ್ ಹೇಳಿದರು.
ಅವರು ಮೂಡುಬಿದಿರೆ ರೋಟರ್ಯಾಕ್ಟ್ ಕ್ಲಬ್‌ನ 2016-17 ನೆ ಸಾಲಿನ ಅಧ್ಯಕ್ಷ ಅಮರ್ ಕೋಟೆ ಮತ್ತು ಪದಾಧಿಕಾರಿಗಳಿಗೆ ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಮ್ಮಿಲನ್ ಹಾಲ್‌ನಲ್ಲಿ ಪದಗ್ರಹಣ ನೆರವೇರಿಸಿ ಮಾತನಾಡಿದರು.
ರೋಟರ್ಯಾಕ್ಟ್ ಕ್ಲಬ್ ಸದಾ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂಬುದಕ್ಕೆ ಈ ಹಿಂದೆಯೇ ರೋಟರ್ಯಾಕ್ಟ್‌ನಿಂದ ನಡೆಸಲ್ಪಟ್ಟ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳೇ ಸಾಕ್ಷಿ ಎಂದು ಹೇಳಿದರು.
ಜಿಲ್ಲಾ 3181ರ ರೋಟರ್ಯಾಕ್ಟ್ ಪ್ರತಿನಿಧಿ ಹಿತೈಷಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಸ್ತೆ ಸುರಕ್ಷೆ ಮತ್ತು ಮಾದಕ ವ್ಯವಸನ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ಹಾಗೂ ಕ್ಲಬ್‌ಗೆ ಸೇರ್ಪಡೆಗೊಂಡಿರುವ 10 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.
ಉದ್ಯಮಿ, ಮುಹಮ್ಮದಾಲಿ ಅಬ್ಬಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಶವು ವಿಶ್ವಮಟ್ಟದಲ್ಲಿಯೇ ಪವರ್‌ಫುಲ್ ಮತ್ತು ಬುದ್ಧಿಶಾಲಿಯೆಂದು ಗುರುತಿಸಿಕೊಂಡಿದೆ. ನಮ್ಮ ಯುವಜನರು ಉನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ದೇಶವನ್ನು ಗುರುತಿಸಿಕೊಳ್ಳುವಂತೆ ಮಾಡಿದೆ. ಆದ್ದರಿಂದ ಯುವಜನರು ವಿದೇಶಗಳತ್ತ ಹೋಗುವ ಯೋಚನೆಯನ್ನು ಮಾಡದೆ ನಮ್ಮ ದೇಶದಲ್ಲಿಯೇ ಇದ್ದು ಹೂಡಿಕೆಗಳನ್ನು ಹೂಡಿ ಉತ್ತಮ ಸಾಧನೆಗಳನ್ನು ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕ್ಲಬ್‌ನ ನೂತನ ಅಧ್ಯಕ್ಷ ಅಮರ್ ಕೋಟೆ ಮಾತನಾಡಿ ಕ್ಲಬ್‌ನ ಏಳಿಗೆಗೆ, ವರ್ಷಪೂರ್ತಿ ಸಂಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ತನ್ನ ಜೊತೆ ಸದಸ್ಯರು ಸಹಕರಿಸುವಂತೆ ವಿನಂತಿಸಿದರು.
ಇದೇ ಸಂದರ್ದಲ್ಲಿ 2015-16 ನೆ ಸಾಲಿನ ರೋಟರ್ಯಾಕ್ಟ್ ಸಭಾಪತಿ ಮುಹಮ್ಮದ್ ಆರಿಫ್, ಕಳೆದ ಸಾಲಿನ ರೋಟರಿ ಅಧ್ಯಕ್ಷ ಪಿ.ಕೆ. ತೋಮಸ್ ಹಾಗೂ ಸುರೇಶ್ ಶೆಟ್ಟಿ ಅವರನ್ನು ಕ್ಲಬ್‌ನ ವತಿಯಿಂದ ಗೌರವಿಸಲಾಯಿತು.
ನೂತನ ಸಭಾಪತಿ ಸುರೇಶ್ ಜೈನ್ ಉಪಸ್ಥಿತರಿದ್ದರು. ಕ್ಲಬ್‌ನ ನಿರ್ಗಮನ ಅಧ್ಯಕ್ಷ ಮುಹಮ್ಮದ್ ಆರೀಶ್ ಸ್ವಾಗತಿಸಿದರು. ಗೌತಮ್ ವಾರ್ಷಿಕ ವರದಿ ವಾಚಿಸಿದರು. ಸದಸ್ಯರಾದ ಅಮರ್‌ದೀಪ್ ಮತ್ತು ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಚಿನ್ ಫೆರ್ನಾಂಡಿಸ್ ವಂದಿಸಿದರು.