ಸಿಐಡಿ ತಂಡದ ಆಗಮನದ ನಿರೀಕ್ಷೆಯಲ್ಲಿ ಉಡುಪಿ
ಉಡುಪಿ, ಆ.17: ಎನ್‌ಆರ್‌ಐ ಉದ್ಯಮಿ ಭಾಸ್ಕರ ಶೆಟ್ಟಿ ‘ಹೋಮಕುಂಡ’ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಇದೀಗ ತನಿಖಾ ಸಂಸ್ಥೆಯ ತನಿಖಾಧಿಕಾರಿಗಳ ಆಗಮನವನ್ನು ಉಡುಪಿ ನಿರೀಕ್ಷಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ‘ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವ ಮಾಹಿತಿ ಬಂದಿದ್ದು, ಒಂದೆರಡು ದಿನದೊಳಗೆ ಇಲ್ಲಿಗೆ ಬರುವ ನಿರೀಕ್ಷೆ ಇರುವ ಸಿಐಡಿ ತಂಡಕ್ಕೆ ಈವರೆಗೆ ಜಿಲ್ಲಾ ಪೊಲೀಸರು ತನಿಖೆ ನಡೆಸಿ ಸಂಗ್ರಹಿಸಿರುವ ಎಲ್ಲಾ ಮಾಹಿತಿ, ಸಾಕ್ಷಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ನಾವಿನ್ನು ಪ್ರಕರಣದ ಯಾವುದೇ ತನಿಖೆ ನಡೆಸುವುದಿಲ್ಲ. ಸಿಐಡಿ ತನಿಖೆಗೆ ಪೂರಕವಾಗಿ ಮಾತ್ರ ನಾವು ಸಹಕರಿಸುತ್ತೇವೆ. ತಂಡ ಯಾವುದೇ ಕ್ಷಣದಲ್ಲಿ ಬಂದು ತನಿಖೆಯ ಉಸ್ತುವಾರಿಯನ್ನು ವಹಿಸಿಕೊಳ್ಳಬಹುದು ಎಂದರು. ಈ ನಡುವೆ ಭಾಸ್ಕರ ಶೆಟ್ಟಿ ಅವರ ಡಿಎನ್‌ಎ ಪರೀಕ್ಷೆಗಾಗಿ ತಾಯಿ ಮತ್ತು ಸಹೋದರರ ರಕ್ತದ ಸ್ಯಾಂಪಲ್ ಪಡೆಯಲು ಸಲ್ಲಿಸಲಾದ ಅರ್ಜಿಯ ಕುರಿತು ತೀರ್ಪನ್ನು ಜಿಲ್ಲಾ ನ್ಯಾಯಾ ಲಯ ನಾಳೆ ನೀಡುವ ನಿರೀಕ್ಷೆ ಇದೆ. ಐವರು ಆರೋಪಿಗಳು ಆ.24ರವರೆಗೆ ನ್ಯಾಯಾಂಗ ಬಂಧ ನ ದಲ್ಲಿದ್ದಾರೆ. ರಾಜೇಶ್ವರಿ ಶೆಟ್ಟಿ ಮಂಗಳೂರು ಜೈಲಿನಲ್ಲಿದ್ದರೆ, ಉಳಿದ ನಾಲ್ವರಾದ ನವನೀತ್ ಶೆಟ್ಟಿ, ನಿರಂಜನ ಭಟ್, ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಹಿರಿಯಡ್ಕ ಸಮೀಪದ ಅಂಜಾರು ಜೈಲಿನಲ್ಲಿದ್ದಾರೆ.