ಮಹಿಳಾ ಕುಸ್ತಿ: ಐತಿಹಾಸಿಕ ಕಂಚಿನ ಸಾಧನೆಗೆ ’ಸಾಕ್ಷಿ’
ರಿಯೊ ಡಿ ಜನೈರೊ,ಆ.18: ಸಾಂಬಾ ನಾಡಿನ ಒಲಿಂಪಿಕ್ಸ್ ಗ್ರಾಮದ ಪೋಡಿಯಂನಲ್ಲಿ ಕೊನೆಗೂ ಜನ ಗಣ ಮನ ಮೊಳಗಿತು. ಭಾರತದ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ದೇಶಕ್ಕೆ ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಮೊಟ್ಟಮೊದಲ ಪದಕ ಗೆದ್ದುಕೊಟ್ಟರು. 58 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸಾಕ್ಷಿ ಕಿರ್ಗಿಸ್ತಾನ್‌ನ ಐಸುಲೂ ಟಿನಿಬೆಕೋವ್ ವಿರುದ್ಧ 8-5 ಅಂತರದ ಜಯ ಸಾಧಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟರು.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 0-5 ಹಿನ್ನೆಡೆಯಿಂದ ಚೇತರಿಸಿಕೊಂಡು ಅಮೋಘ ಪ್ರದರ್ಶನ ನೀಡಿದ ಉಕ್ಕಿನ ಮಹಿಳೆ ಪಂದ್ಯದ ಜತೆಗೆ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ಹೃದಯ ಗೆದ್ದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿದ ಭಾರತದ ನಾಲ್ಕನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. 2000ನೇ ಇಸ್ವಿ ಸಿಡ್ನಿ ಒಲಿಂಪಿಕ್ಸ್‌ನ ವೈಟ್ ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೇರಿ ಕೋಮ್ ಹಾಗೂ ಸೈನಾ ನೆಹ್ವಾಲ್ ಈ ಮುನ್ನ ಭಾರತದ ಪರ ಪದಕ ಸಾಧನೆ ಮಾಡಿದ ಮಹಿಳಾ ಅಥ್ಲೀಟ್‌ಗಳು.
ಹರ್ಯಾಣದ ರೋಹ್ಟಕ್ ಮೂಲದ 23 ವರ್ಷದ ಸಾಕ್ಷಿ ಮಲಿಕ್, ಇತರ ನಾಲ್ಕು ಪಂದ್ಯಗಳಂತೆ ಈ ಪಂದ್ಯದಲ್ಲೂ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ನಾಟಕೀಯ ಜಯ ಸಾಧಿಸಿ ಪದಕ ಸಾಧನೆ ಮಾಡಿದರು. ಕ್ವಾರ್ಟರ್ ಫೈನಲ್‌ನಲ್ಲಿ 2-0ರಿಂದ ರಷ್ಯಾದ ವಲೇರಿಯಾ ಕೊಬ್ಲೋವ್ ವಿರುದ್ಧ ಸೋಲು ಅನುಭವಿಸಿದರು. ಆದರೆ ವಲೇರಿಯಾ ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ಭಾರತದ ಕುಸ್ತಿಪಟುವಿಗೆ ಕಂಚಿನ ಪದಕಕ್ಕೆ ಹೋರಾಡುವ ಅವಕಾಶ ದೊರೆಯಿತು
ಕಿರ್ಗಿಸ್ತಾನದ ಕುಸ್ತಿಪಟು ಪಂದ್ಯದುದ್ದಕ್ಕೂ ಹಿಡಿತ ಸಾಧಿಸಿದ್ದರೂ, ಬೌಟ್‌ನ ಪ್ರಮುಖ ಘಟ್ಟಗಳಲ್ಲಿ ಅಮೋಘ ನಿರ್ವಹಣೆ ತೋರಿದ ಸಾಕ್ಷಿ ಕೊನೆಗೂ ಜಯ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲ ಅವಧಿ ಮುಗಿದಾಗ 0-5 ಹಿನ್ನಡೆಯಲ್ಲಿದ್ದ ಸಾಕ್ಷಿ, ದ್ವಿತೀಯಾರ್ಧದಲ್ಲಿ ಎದುರಾಳಿಯನ್ನು ಮ್ಯಾಟ್ ಮೇಲೆ ಕೆಡವುವ ಮೂಲಕ ಮೊದಲ ಅಂಕ ಸಂಪಾದಿಸಿದರು. ಮತ್ತೆ ಮೂರು ಅಂಕ ಸಂಪಾದಿಸಿ ಹಿನ್ನಡೆಯನ್ನು 4-5ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
5-5 ಸಮಬಲ ಸಾಧಿಸಿದ ಬಳಿಕ ಸಾಕ್ಷಿ ಹಿಂದಿರುಗಿ ನೋಡಲೇ ಇಲ್ಲ. ಅಂತಿಮ ಕ್ಷಣದಲ್ಲಿ ಕಿರ್ಗಿಸ್ತಾನದ ಕುಸ್ತಿಪಟುವನ್ನು ಕೆಡವಿದ ಸಾಕ್ಷಿ ಪ್ರಮುಖ ಮೂರು ಅಂಕ ಸಂಪಾದಿಸಿದರು. ಇದಕ್ಕೂ ಮುನ್ನ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ ಮಂಗೋಲಿಯಾದ ಪುರೆವೊಡೊರ್ಜಿನ್ ಒರ್ಕಾನ್ ವಿರುದ್ಧ 12-3 ಭಾರಿ ಅಂತರದ ಜಯ ಸಾಧಿಸಿದರು.