×
Ad

212 ಸಿಖ್ ಅನಿವಾಸಿ ಕುಟುಂಬಗಳನ್ನು ಕಪ್ಪು ಪಟ್ಟಿಯಿಂದ ತೆಗೆದ ಪ್ರಧಾನಿ ಕಚೇರಿ

Update: 2016-08-18 08:34 IST

ಹೊಸದಿಲ್ಲಿ, ಆ.18: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಪಂಜಾಬ್‌ನಲ್ಲಿ ಸಿಖ್  ಸಮುದಾಯವನ್ನು ಓಲೈಸುವ ಪ್ರಯತ್ನವಾಗಿ ಪ್ರಧಾನಿ ಕಚೇರಿ 213 ಸಿಖ್ ಅನಿವಾಸಿ ಕುಟುಂಬಗಳನ್ನು ಕಪ್ಪು ಪಟ್ಟಿಯಿಂದ ತೆಗೆದು ಹಾಕಿದೆ. ಬೇಹು ಇಲಾಖೆ ಅಭಿಪ್ರಾಯದ ವಿರುದ್ಧ ಕೈಗೊಂಡ ಕೇಂದ್ರದ ಕ್ರಮ ಚರ್ಚೆಗೆ ಗ್ರಾಸವಾಗಿದೆ. 1984ರ ಬ್ಲೂಸ್ಟಾರ್ ಕಾರ್ಯಾಚರಣೆ ಮತ್ತು 1985ರ ಕನಿಷ್ಕ ವಿಮಾನ ಬಾಂಬ್ ಘಟನೆ ಬಳಿಕ ಕಾಂಗ್ರೆಸ್ ಸರಕಾರ ಈ ಕಪ್ಪುಪಟ್ಟಿ ಸಿದ್ಧಪಡಿಸಿತ್ತು.

ಈ ನಿಷೇಧದಿಂದ ತೊಂದರೆಗೀಡಾದ ಸಿಖ್  ಕುಟುಂಬಗಳು ಪ್ರಮುಖವಾಗಿ ಅಮೆರಿಕ, ಇಂಗ್ಲೆಂಡ್ ಹಾಗೂ ಕೆನಡಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಕುಟುಂಬಗಳಾಗಿವೆ. ಅಮೃತಸರದ ಸ್ವರ್ಣಮಂದಿರದಲ್ಲಿ ಆಶ್ರಯ ಪಡೆದಿದ್ದ ಖಾಲಿಸ್ತಾನ ಚಳವಳಿ ಪ್ರತ್ಯೇಕತಾವಾದಿ ಉಗ್ರರನ್ನು ಸದೆಬಡಿಯುವ ಸಲುವಾಗಿ ಬ್ಲೂಸ್ಟಾರ್ ಆಪರೇಷನ್ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಂದಿನ ಪ್ರಧಾನಿ ಇಂದಿರಾಗಾಂಧಿ ಆದೇಶಿಸಿದ್ದರು.

1985ರಲ್ಲಿ ಮಾಂಟ್ರಿಯಲ್‌ನಿಂದ ಹೊಸದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ಕನಿಷ್ಕ ವಿಮಾನ, ಐರ್ಲೆಂಡ್ ವಾಯುಪ್ರದೇಶದಲ್ಲಿ ಬರುತ್ತಿದ್ದಾಗ ವಿಮಾನದೊಳಗಿದ್ದ ಪ್ರತ್ಯೇಕತಾವಾದಿ ಗುಂಪಿನ ಆತ್ಮಹತ್ಯಾ ಬಾಂಬರ್‌ಗಳು ವಿಮಾನವನ್ನು ಸ್ಫೋಟಿಸಿ 329 ಮಂದಿಯ ಜೀವಹಾನಿಗೆ ಕಾರಣರಾಗಿದ್ದರು. ಕೆನಡಾದಲ್ಲಿದ್ದ ಸಿಖ್ ಉಗ್ರಗಾಮಿ ಗುಂಪು ಈ ಕೃತ್ಯ ಎಸಗಿತ್ತು.

ಒಟ್ಟು 324 ಕುಟುಂಬಗಳು ಈ ಕಪ್ಪು ಪಟ್ಟಿಯಲ್ಲಿದ್ದು, ಗೃಹ ಇಲಾಖೆ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿ 212 ಕುಟುಂಬಗಳನ್ನು ಪಟ್ಟಿಯಿಂದ ಕಿತ್ತುಹಾಕಲು ಶಿಫಾರಸ್ಸು ಮಾಡಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಮೋದಿ ಕೆನಡಾ ಹಾಗೂ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ಸಿಕ್ಖ್ ಕುಟುಂಬಗಳು ಈ ಆಗ್ರಹ ಮುಂದಿಟ್ಟಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News