×
Ad

ದೀಪಾಗೆ ಖೇಲ್ ರತ್ನ, ಆಕೆಯ ಕೋಚ್‌ಗೆ ದ್ರೋಣಾಚಾರ್ಯ ಪ್ರಶಸ್ತಿ?

Update: 2016-08-18 08:40 IST

ಹೊಸದಿಲ್ಲಿ, ಆ.18: ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ನಾಲ್ಕನೆ ಸ್ಥಾನ ಗಳಿಸಿರುವ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಹಾಗೂ ಶೂಟರ್ ಜಿತು ರೈ ಅವರ ಹೆಸರನ್ನು ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಗಣನೀಯ ಸಾಧನೆ ಮಾಡಿದ ಒಬ್ಬ ಕ್ರೀಡಾಪಟುವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇತ್ತೀಚಿಗೆ ಈ ಗೌರವಕ್ಕೆ ಪಾತ್ರರಾದವರೆಂದರೆ ಸಾನಿಯಾ ಮಿರ್ಜಾ. ದೀಪಾ ಹೆಸರು ಪಟ್ಟಿಯಲ್ಲಿರಲಿಲ್ಲ; ಆದರೆ ಒಲಿಂಪಿಕ್ಸ್‌ನಲ್ಲಿ ಆಕೆಯ ಸಾಧನೆಯ ಹಿನ್ನೆಲೆಯಲ್ಲಿ ಆಕೆಯ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದ್ದು, ಆಕೆಯ ಕೋಚ್ ಬಿಸೇಶ್ವರ್ ನಂದಿ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

"ಮಗಳು ಈ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆದ್ದುಕೊಡಲು ಸಾಧ್ಯವಾಗಲಿಲ್ಲ. ಆದರೆ ಆಕೆಯ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವುದು ಅತೀವ ಸಂತಸ ತಂದಿದೆ. 2020ರ ಒಲಿಂಪಿಕ್ಸ್‌ನಲ್ಲಿ ಆಕೆ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಡುತ್ತಾಳೆ" ಎಂದು ದೀಪಾ ತಂದೆ ದುಲಾಲ್ ಕರ್ಮಾಕರ್ ಹೇಳಿದ್ದಾರೆ.

23 ವರ್ಷದ ಜಿಮ್ನಾಸ್ಟ್, ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಫೈನಲ್ಸ್‌ನಲ್ಲಿ 15.006 ಅಂಕಗಳ ಜೀವನ ಶ್ರೇಷ್ಠ ನಿರ್ವಹಣೆ ತೋರಿ, 0.150 ಅಂಕದಿಂದ ಪದಕ ವಂಚಿತರಾಗಿದ್ದರು. ಅಮೆರಿಕದ ಸಿಮೋನ್ ಬೈಲ್ಸ್ 15.966 ಅಂಕದೊಂದಿಗೆ ಚಿನ್ನದ ಸಾಧನೆ ಮಾಡಿದ್ದರು.

ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ 3ನೆ ರ್ಯಾಂಕಿಂಗ್ ಹೊಂದಿರುವ ಜಿತು ರೇ, ಈ ಒಲಿಂಪಿಕ್ಸ್‌ನಲ್ಲಿ 8ನೆ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News