×
Ad

ಉಡುಪಿ: ಗೋರಕ್ಷಕರಿಂದ ಜಾನುವಾರು ದಲ್ಲಾಳಿಯ ಹತ್ಯೆ

Update: 2016-08-18 10:01 IST

ಉಡುಪಿ, ಆ.18: ಗೋ ಸಾಗಾಟದ ಆರೋಪದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಗುಂಪೊಂದು ದಾಳಿ ನಡೆಸಿ ಕಬ್ಬಿಣ ರಾಡ್‌ನಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಯುವಕನೊಬ್ಬನನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ಆ.17ರಂದು ಬ್ರಹ್ಮಾವರ ಕೊಕ್ಕರ್ಣೆ ಸಮೀಪದ ಕೆಂಜೂರು ಎಂಬಲ್ಲಿ ನಡೆದಿದೆ.

ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಕೆಂಜೂರು ಪಾದೆಮಠ ನಿವಾಸಿ ವಾಸು ಪೂಜಾರಿ ಹಾಗೂ ಬೇಬಿ ದಂಪತಿಯ ಪುತ್ರ ಪ್ರವೀಣ್ ಪೂಜಾರಿ(29) ಎಂಬವರೇ ಸಂಘಪರಿವಾರದ ಕಾರ್ಯಕರ್ತರ ದಾಳಿಗೆ ಬಲಿಯಾದವರು. ಇವರೊಂದಿಗೆ ಇದ್ದ ನೆರೆಮನೆಯ ಭಾಸ್ಕರ್ ದೇವಾಡಿಗ ಎಂಬವರ ಮಗ ಅಕ್ಷಯ್ ದೇವಾಡಿಗ(25) ಎಂಬವರು ತೀವ್ರ ಗಾಯಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಜಾಗರಣಾ ವೇದಿಕೆ ಮುಖಂಡ ಸಂತೆಕಟ್ಟೆಯ ಪೆಟ್ರೋಲ್ ಬಂಕ್‌ನ ಮಾಲಕ ಅರವಿಂದ ಕೋಟೇಶ್ವರ, ಕಳತ್ತೂರಿನ ಶ್ರೀಕಾಂತ್ ಕುಲಾಲ್, ಮೊಗವೀರಪೇಟೆಯ ಗಣೇಶ್, ಕಡಂಗೋಡಿನ ಉಮೇಶ್ ನಾಯ್ಕೋ, ಸುಕೇಶ್, ರಾಜೇಶ್, ಪ್ರಕಾಶ್ ಸೇರಿಗಾರ್, ಸಂತೆಕಟ್ಟೆಯ ಪ್ರದೀಪ್, ಹೊಯ್ಗೆಬೆಳಾರಿನ ರಾಜಾ, ಸುದೀಪ್ ಸೇರಿದಂತೆ 18 ಮಂದಿಯನ್ನು ಬಂಧಿಸಿದ್ದು, ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಹಲವು ಮಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಘಟನೆಯ ಹಿನ್ನೆಲೆ:

ಕೆಂಜೂರು ಬಿಜೆಪಿ ಸ್ಥಾನೀಯ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಪ್ರವೀಣ್ ಪೂಜಾರಿ, ಮನೆ ಸಮೀಪ ದಿನಸಿ, ಶೇಂದಿ ಅಂಗಡಿ ಹಾಗೂ ಕೋಳಿ ಫಾರ್ಮ್ ವ್ಯಾಪಾರ ನಡೆಸುತ್ತಿದ್ದರು. ಅದೇ ರೀತಿ ಬಿಸ್ಲೇರಿ ಕಂಪೆನಿಯ ವಿತರಕರಾಗಿದ್ದ ಇವರು, ಇವುಗಳೊಂದಿಗೆ ದನದ ವ್ಯಾಪಾರ ಕೂಡ ನಡೆಸುತ್ತಿದ್ದರು. ಮಾರುತಿ ಕಾರು, ಟಾಟಾ ಏಸ್ ಮತ್ತು ಟೆಂಪೊ ರಿಕ್ಷಾವನ್ನು ಹೊಂದಿದ್ದ ಪ್ರವೀಣ್, ಬೇರೆ ಸಮಯದಲ್ಲಿ ತನ್ನ ಟೆಂಪೊ ರಿಕ್ಷಾವನ್ನು ಬಾಡಿಗೆಗೆ ಬಳಸಿಕೊಳ್ಳುತ್ತಿದ್ದರು. ಅಕ್ಷಯ್ ದೇವಾಡಿಗ ಈ ವಾಹನದ ಚಾಲಕರಾಗಿದ್ದರು.

ಆ.17ರಂದು ಸಂಜೆ ಕೊಕ್ಕರ್ಣೆ ಸಮೀಪದ ವಡ್ಡಂಬೆಟ್ಟು ನಿವಾಸಿ ರಮೇಶ್ ಪೂಜಾರಿ ಎಂಬವರು ನೀಡಿದ ಮಾಹಿತಿಯಂತೆ ಅವರಿಬ್ಬರು ದನಕ್ಕಾಗಿ ಮುದ್ದೂರಿಗೆ ಟಾಟಾ ಏಸ್ ವಾಹನದಲ್ಲಿ ತೆರಳಿದ್ದರು. ಅಲ್ಲಿ ನರಸಿಂಹ ನಾಯಕ್ ಎಂಬವರಿಂದ ಖರೀದಿಸಿದ ಮೂರು ಕರುಗಳನ್ನು ವಾಹನದಲ್ಲಿ ಕೆಂಜೂರಿಗೆ ತರುತ್ತಿದ್ದಾಗ ಹೆಬ್ರಿ ಸಮೀಪದ ಸಂತೆಕಟ್ಟೆಯ ಕಜಿಕೆ ಎಂಬಲ್ಲಿ ರಾತ್ರಿ7:30ರ ಸುಮಾರಿಗೆ ಸುಮಾರು 25-30ಮಂದಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತಡೆದರು. ಈ ಸಂದರ್ಭದಲ್ಲಿ ರಮೇಶ್ ಪೂಜಾರಿ ತಪ್ಪಿಸಿಕೊಂಡು ಪರಾರಿಯಾದರು. ವಾಹನದಲ್ಲಿದ್ದ ಪ್ರವೀಣ್ ಹಾಗೂ ಅಕ್ಷಯ್‌ಗೆ ಕಾರ್ಯಕರ್ತರ ತಂಡ ಕಬ್ಬಿಣದ ರಾಡ್, ಮರದ ಸೊಂಟೆ ಹಾಗೂ ಕೈಯಿಂದ ಮಾರಣಾಂತಿಕ ಹಲ್ಲೆ ನಡೆಸಿತು. ಅಲ್ಲದೆ ಇವರ ವಾಹನವನ್ನು ಪುಡಿಗೈಯ್ಯಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ವಾಹನ ಸಮೇತ ಕೆಂಜೂರಿಗೆ ಕರೆದೊಯ್ದ ದುಷ್ಕರ್ಮಿಗಳು, ಪೊಲೀಸರಿಗೆ ದೂರವಾಣಿ ಕರೆ ಮಾಡಿ ದನ ಸಾಗಾಟಗಾರ ರನ್ನು ಹಿಡಿದಿದ್ದೇವೆ ಬನ್ನಿ ಅಂತ ಹೇಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಇವರಿಬ್ಬರನ್ನು ಬ್ರಹ್ಮಾವರ ಆಸ್ಪತ್ರೆಗೆ ಸಾಗಿಸಿದರು. ಆದರೆ ಅವರಲ್ಲಿ ಪ್ರವೀಣ್ ಪೂಜಾರಿ ರಾತ್ರಿ 11:55 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ವಾಸು ಪೂಜಾರಿ ಹಾಗೂ ಬೇಬಿ ದಂಪತಿಗೆ ಪ್ರವೀಣ್ ಪೂಜಾರಿ, ನವೀನ್ ಹಾಗೂ ಪ್ರಮೀಳಾ ಎಂಬ ಮೂವರು ಮಕ್ಕಳು. ಇವರಲ್ಲಿ ಪ್ರವೀಣ್ ಹಿರಿಯ ಮಗ. ಪ್ರಮೀಳಾಗೆ ಕಾರ್ಕಳದ ಪ್ರಸಾದ್ ಅವರೊಂದಿಗೆ ವಿವಾಹವಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿಯ ಆಸ್ಪತ್ರೆಯ ಶವಗಾರದಲ್ಲಿ ನಡೆಸಲಾಯಿತು. ಮೃತರ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ಜಿಪಂ ಸದಸ್ಯ ಸುರೇಶ್ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್ ಮೊದಲಾದವರು ಭೇಟಿ ನೀಡಿದರು.ಶವಾಗಾರಕ್ಕೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಭೇಟಿ ನೀಡಿದರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 143, 147, 148, 341, 302, 324, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಟಾಟಾ ಏಸ್ ವಾಹನದಲ್ಲಿ ಮೂರು ಕರು ಸಾಗಾಟ ಮಾಡುತ್ತಿದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿ ಪ್ರವೀಣ್ ಪೂಜಾರಿ ಹಾಗೂ ಅಕ್ಷಯ್‌ಗೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರವೀಣ್ ಪೂಜಾರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿ ಕೊಂಡು 17 ಮಂದಿಯನ್ನು ಬಂಧಿಸಲಾಗಿದೆ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಲ್ಲೆ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದರೆ, ಪ್ರವೀಣ್ ಪೂಜಾರಿ ಮೃತಪಟ್ಟದ್ದು ಬ್ರಹ್ಮಾವರ ಪೊಲೀಸ ಠಾಣಾ ವ್ಯಾಪ್ತಿಯ ಕೆಂಜೂರಿನಲ್ಲಿ.

-ಕೆ.ಟಿ.ಬಾಲಕೃಷ್ಣ, ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ.

ರಾತ್ರಿ ಎಂಟು ಗಂಟೆಗೆ ಅಂಗಡಿಯಿಂದ ಹೋದವನ ಪತ್ತೆ ಇಲ್ಲ. ಕರೆ ಮಾಡಿದರೆ ಮೊಬೈಲ್ ಸ್ವಿಚ್‌ಆಫ್ ಇತ್ತು. ಕೆಲ ಹೊತ್ತಿನ ಬಳಿಕ ಹಲ್ಲೆ ನಡೆಸಿ ದವರು ಕರೆ ಮಾಡಿ ನಮಗೆ ಬೈದರು. ಇಲ್ಲಿ ಪ್ರವೀಣ್ ವಾಹನ ಹೂತು ಹೋಗಿದೆ ಅಂತ ಹೇಳಿದರು. ಅದು ಬಿಟ್ಟು ಬೇರೆ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಬಾಡಿಗೆಗೆಂದು ಕರೆದುಕೊಂಡು ಹೋಗಿ ಈ ರೀತಿ ಮಾಡಿದ್ದಾರೆ.

-ಬೇಬಿ ಪೂಜಾರ್ತಿ, ಮೃತ ಪ್ರವೀಣ್ ಪೂಜಾರಿ ತಾಯಿ

ಹಿಂದೂ ಸಂಘಟನೆಯ ಕಾರ್ಯಕರ್ತರು ಹೇಳಿಕೊಂಡು ಇಂತಹ ನೀಚ ಕೃತ್ಯ ಮಾಡಬಾರದು. ಇವರಿಗೆ ತಕ್ಕ ಶಿಕ್ಷೆಯಾಗಬೇಕು. ಒಂದು ತಾಯಿಗೆ ಮಗ ಇಲ್ಲದಂತೆ ಮಾಡಿದ್ದಾರೆ. ತಾಯಿಯ ಕಣ್ಣೀರು ಇವರನ್ನು ಬಿಡಲ್ಲ. ಇಂತಹ ಪರಿಸ್ಥಿತಿ ಮುಂದೆ ಆಗಬಾರದು. ಆ ರೀತಿಯಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು.

-ಪ್ರಸಾದ್, ಮೃತ ಪ್ರವೀಣ್ ಪೂಜಾರಿ ಭಾವ

ನಾನು ಅಮಾಯಕ: ಅಕ್ಷಯ್ ದೇವಾಡಿಗ

‘ನಮ್ಮ ಮೇಲೆ ಹಲ್ಲೆ ನಡೆಸುವಾಗ ಗುಂಪಿನಲ್ಲಿ ಕೆಲವರು ನನ್ನ ಕುರಿತು ಇವ ಯಾವುದರಲ್ಲಿಯೂ ಇಲ್ಲ, ಇವನಿಗೆ ಹೊಡೆಯುವುದು ಬೇಡ ಅಂತ ಹೇಳುತ್ತಿದ್ದರು. ಆದರೂ ನನ್ನ ಮೇಲೆ ಹಲ್ಲೆ ಮುಂದುವರಿಸಿದ್ದರು. ನಾನು ಈ ಪ್ರಕರಣದಲ್ಲಿ ಅಮಾಯಕ’

ಗೋರಕ್ಷಕರಿಂದ ಹಲ್ಲೆಗೆ ಒಳಗಾಗಿ ಇದೀಗ ಬ್ರಹ್ಮಾವರ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಕ್ಷಯ್ ದೇವಾಡಿಗ ಈ ವಿಷಯವನ್ನು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ. ‘ನಾನು ಮನೆಯಲ್ಲಿರುವಾಗ ನನಗೆ ಪ್ರವೀಣ್ ಪೂಜಾರಿ ಕರೆ ಮಾಡಿ ಕೆಂಜೂರಿನಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಕಜಿಕೆ ಎಂಬಲ್ಲಿ ಟಾಟಾ ಏಸ್ ವಾಹನ ಹೂತು ಹೋಗಿದ್ದು, ಕೂಡಲೇ ಬರುವಂತೆ ಹೇಳಿದ್ದರು. ಅದರಂತೆ ನಾನು ಅಲ್ಲಿಗೆ ಹೋಗಿ ವಾಹನವನ್ನು ಮೇಲಕ್ಕೆತ್ತಿದೆ. ಆಗ ಅಲ್ಲಿ ಕೊಕ್ಕರ್ಣೆಯ ರಮೇಶ್ ಎಂಬವರು ಇದ್ದರು. ನಂತರ ಪ್ರವೀಣ್, ನನಗೆ ವಾಹನ ಚಲಾಯಿಸುವಂತೆ ತಿಳಿಸಿದರು. ಆದರೆ ವಾಹನದ ಹಿಂಬದಿಯಲ್ಲಿ ಏನು ಇತ್ತು ಎಂಬುದು ನನಗೆ ಗೊತ್ತಿರಲಿಲ್ಲ’

ಹಾಗೆ ವಾಹನದಲ್ಲಿ ಕುಳಿತು ಚಲಾಯಿಸುವಾಗ ಸ್ಥಳಕ್ಕೆ ಹಲವು ಮಂದಿ ದಾಳಿ ನಡೆಸಿದರು. ಆಗ ರಮೇಶ್ ಅಲ್ಲಿಂದ ಪರಾರಿಯಾದರು. ನಂತರ ನಮ್ಮಿಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನದ ಹಿಂಬದಿಯಲ್ಲಿ ಹಾಕಿ ಕೆಂಜೂರಿಗೆ ತಂದು ಪೊಲೀಸರಿಗೆ ಕರೆ ಮಾಡಿದರು. ನಂತರ ಪೊಲೀಸರು ಬಂದು ನಮ್ಮನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದು ಅಕ್ಷಯ್ ಹೇಳಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಕ್ಷಯ್‌ನ ಬೆನ್ನು, ಕೈಗಳಲ್ಲಿ ರಾಡಿನಿಂದ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಏಳನೆ ತರಗತಿಯವರೆಗೆ ಕಲಿತಿ ರುವ ಅಕ್ಷಯ್ ಆರು ತಿಂಗಳ ಹಿಂದೆಯಷ್ಟೆ ಪ್ರವೀಣ್ ಕುಮಾರ್ ನಡೆಸುತ್ತಿ ರುವ ಬಿಸ್ಲೇರಿ ವಿತರಣೆಯ ವಾಹನದ ಚಾಲಕನಾಗಿ ಸೇರಿಕೊಂಡಿದ್ದನು. ಭಾಸ್ಕರ ದೇವಾಡಿಗ ಹಾಗೂ ಸವಿತಾ ದೇವಾಡಿಗ ದಂಪತಿಯ ಒಬ್ಬನೆ ಮಗನಾಗಿರುವ ಈತ ಈ ಇಡೀ ಬಡ ಕುಟುಂಬಕ್ಕೆ ಆಧಾರವಾಗಿದ್ದನು. ಈತನ ತಂಗಿ ವರ್ಷದ ಹಿಂದೆ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News