ಕೇಂದ್ರ ಸಚಿವ ವಿ. ಕೆ. ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ ಸೇನಾ ಮುಖ್ಯಸ್ಥ ದಲ್ಬೀರ್
ಹೊಸದಿಲ್ಲಿ, ಆ.18: ನನ್ನ ಮೇಲೆ ತಪ್ಪು, ಆಧಾರ ರಹಿತ ಹಾಗೂ ಕಾಲ್ಪನಿಕ ಆರೋಪದ ಮೂಲಕ ಕಾನೂನುಬಾಹಿರ ನಿಷೇಧ ವಿಧಿಸಿದರು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು ಕೇಂದ್ರ ಸಚಿವ ವಿ.ಕೆ.ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.
ಸೇನಾ ಕಮಾಂಡರ್ ಆಗಿ ಬಡ್ತಿ ಪಡೆಯುವುದನ್ನು ತಪ್ಪಿಸಲು ನನ್ನನ್ನು ಸಿಂಗ್ ಬಲಿಪಶು ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ದಲ್ಬೀರ್ ಆಪಾದಿಸಿದ್ದಾರೆ. ಸೇನೆಯ ಹಾಲಿ ಮುಖ್ಯಸ್ಥರೊಬ್ಬರು ಮಾಜಿ ಮುಖ್ಯಸ್ಥರ ಮೇಲೆ ಬಹಿರಂಗ ಸಮರ ಸಾರಿರುವುದು ದೇಶದ ಇತಿಹಾಸದಲ್ಲೇ ಮೊದಲು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2012ರ ಮೇ 19ರಂದು ನೀಡಿದ ಶೋಕಾಸ್ ನೋಟಿಸ್‌ನಲ್ಲಿ ನನ್ನ ವಿರುದ್ಧ ಕರ್ತವ್ಯಲೋಪದ ಬಗ್ಗೆ ತಪ್ಪು, ಆಧಾರ ರಹಿತ ಹಾಗೂ ಕಾಲ್ಪನಿಕ ಆರೋಪವನ್ನು ಮಾಡಿ, ಕಾನೂನುಬಾಹಿರ ಶಿಸ್ತುಕ್ರಮ ಹಾಗೂ ವಿಚಕ್ಷಣಾ ನಿಷೇಧ ಹೇರಲಾಯಿತು ಎಂದು ದಲ್ಬೀರ್ ವಿವರಿಸಿದ್ದಾರೆ.
ದಲ್ಬೀರ್ ಅವರನ್ನು ಸೇನಾ ಕಮಾಂಡರ್ ಆಗಿ ಆಯ್ಕೆ ಮಾಡುವಲ್ಲಿ ಸ್ವಜನ ಪಕ್ಷಪಾತ ಕೆಲಸ ಮಾಡಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ದಲ್ಬೀರ್ ಈ ಅಫಿಡವಿಟ್ ಸಲ್ಲಿಸಿದರು. ವಿ.ಕೆ.ಸಿಂಗ್ ಅವರು ಸೇನಾ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ 2012ರ ಎಪ್ರಿಲ್‌ನಿಂದ ಮೇ ವರೆಗೆ ದಲ್ಬೀರ್ ವಿರುದ್ಧ ರಕ್ಷಣಾ ವಿಚಕ್ಷಣಾ ನಿಷೇಧ ಹೇರಿದ್ದರು.
2011ರಲ್ಲಿ ಅಸ್ಸಾಂನ ಜೋರ್ಹತ್‌ನಲ್ಲಿ ನಡೆದ ಕಾರ್ಯಾಚರಣೆ ವೇಳೆ, ನಿಯಂತ್ರಣ ಸಾಧಿಸಲು ವಿಫಲರಾದ ಆರೋಪದಲ್ಲಿ ಈ ಕ್ರಮ ಕೈಗೊಂಡಿದ್ದರು. ಆದರೆ ಜೂನ್‌ನಲ್ಲಿ ಜನರಲ್ ವಿಕ್ರಂ ಸಿಂಗ್ ಅದಿಕಾರಕ್ಕೆ ಬಂದ ಬಳಿಕ ಆ ನಿಷೇಧ ತೆರವುಗೊಳಿಸಲಾಯಿತು. ತಕ್ಷಣ ದಲ್ಬೀರ್ ಅವರನ್ನು ಪೂರ್ವ ಕಮಾಂಡ್‌ನ ಕಮಾಂಡರ್ ಆಗಿ ನೇಮಕ ಮಾಡಲಾಗಿತ್ತು.
ವಿ.ಕೆ.ಸಿಂಗ್ ಸೇನಾ ಮುಖ್ಯಸ್ಥರಾಗಿದ್ದ ಅವಧಿಯ ವಿವಾದ ಇದೇ ಮೊದಲಲ್ಲ. ಅವರು 2012ರಲ್ಲಿ ತಮ್ಮ ಜನ್ಮದಿನಾಂಕದ ದಾಖಲೆಯನ್ನು ಸೇನಾ ದಾಖಲೆಗಳಲ್ಲಿ ಬದಲಾಯಿಸಲು ಅವಕಾಶ ಕೋರಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.