ರಿಯೋದಲ್ಲಿ ಕಂಚು ಗೆದ್ದ ದಿಟ್ಟ ಮಹಿಳೆ ಸಾಕ್ಷಿ ..
ರಿಯೋ ಡಿ ಜನೈರೊ,ಆ.18: ದಿಟ್ಟತನದ ಮಹಿಳೆ ಸಾಕ್ಷಿ ಮಲಿಕ್ ಅವರು ರಿಯೋ ಒಲಿಂಪಿಕ್ಸ್ ನ ಕುಸ್ತಿಯ 58 ಕೆ.ಜಿ ವಿಭಾಗದಲ್ಲಿ ಕಂಚು ಜಯಿಸಿ ರಿಯೋ ಒಲಿಂಪಿಕ್ಸ್ನ ಭಾರತದ ಪದಕದ ಬರ ನೀಗಿಸಿದ್ದಾರೆ. ಒಲಿಂಪಿಕ್ಸ್ ಆರಂಭಗೊಂಡು ಹದಿನೈದು ದಿನ ಕಳೆದರೂ ಪದಕ ಸಿಕ್ಕಿಲ್ಲ ಎಂಬ ನೋವನ್ನು ಸಾಕ್ಷಿ ಮಲಿಕ್ ನಿವಾರಿಸಿದ್ದಾರೆ.
ಕುಸ್ತಿಪಟು ಸಾಕ್ಷಿ ಮಲಿಕ್ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.ಇದರೊಂದಿಗೆ ಭಾರತದ ಪದಕದ ಖಾತೆ ತೆರೆದಿದ್ದಾರೆ.
ಗುರುವಾರ ಬೆಳಗ್ಗಿನ ಜಾವ ನಡೆದ ಮಹಿಳೆಯರ 58 ಕೆಜಿ ಫ್ರೀ ಸ್ಟೈಲ್ ರಿಪಿಚೇಜ್ ಸ್ಪರ್ಧೆಯಲ್ಲಿಕುಸ್ತಿ ಸ್ಪರ್ಧೆಯಲ್ಲಿ ಸಾಕ್ಷಿ ಮಲಿಕ್ ಅವರು ಕಿರ್ಗಿಸ್ತಾನದ ಐಸಿಲೂ ಟೈನೀಬೆಕೋವಾ ಅವರನ್ನು 8-5 ಅಂತರದಿಂದ ಮಣಿಸಿ ಕಂಚಿನ ಪದಕ ಬಾಚಿಕೊಂಡರು.
ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದ ಸಾಕ್ಷಿ ಮಲ್ಲಿಕ್ ಎರಡನೇ ಹಂತದಲ್ಲಿ ಅಮೋಘ ಪ್ರದರ್ಶನದೊಂದಿಗೆ ಮೇಲುಗೈ ಸಾಧಿಸಿ ಗೆಲವು ಸಾಧಿಸಿದರು.
ಈ ಪಂದ್ಯಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಸಾಕ್ಷಿ ಮಂಗೋಲಿಯಾದ ಅರ್ಕೋನ್ ಪುರುವ್ಡೇಜ್ ವಿರುದ್ಧ 12-3 ಅಂತರದಲ್ಲಿ ಗೆದ್ದ ಸಾಕ್ಷಿ ಮಲಿಕ್ ಪದಕದ ಆಸೆ ಜೀವಂತವಾಗಿರಿಸಿದ್ದರು.
ಪದಕ ನಿರೀಕ್ಷೆ ಮೂಡಿಸಿದ್ದ ಘಟಾನುಘಟಿಗಳು ಏನನ್ನು ಸಾಧಿಸಲಾರದೆ ಬರಿಗೈಯಲ್ಲಿ ವಾಪಸಾಗುವ ಹೊತ್ತಿಗೆ ಸಾಕ್ಷಿ ಮಲಿಕ್ ಅವರು ಯಾವುದೇ ಪೂರ್ವ ಸೂಚನೆ ನೀಡದೆ ತನ್ನ ಕಠಿಣ ಪ್ರಯತ್ನದ ಮೂಲಕ ಭಾರತಕ್ಕೆ ಪದಕ ತಂದು ಕೊಟ್ಟಿದ್ದಾರೆ.
ಕ್ವಾರ್ಟರ್‌ಫೈನಲ್‌ನಲ್ಲಿ ಸಾಕ್ಷಿ ಅವರು ರಶ್ಯದ ವಾಲೆರಿಯಾ ಕೊಬ್ಲೊವಾ ವಿರುದ್ಧ 2-9 ಅಂಕಗಳ ಅಂತರದಿಂದ ಶರಣಾಗಿದ್ದರು. ವಾಲೆರಿಯಾ ಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ಸಾಕ್ಷಿ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿದ್ದರು. ಕಂಚು ಪಡೆಯಲು ಈ ಸುತ್ತಿನಲ್ಲಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಬೇಕಾದ ಸವಾಲನ್ನು ಅವರು ಎದುರಿಸಿದ್ದರು..
ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊಡೊವಾದ ಮರಿಯಾನಾ ಚೆರ್ಡಿವರಾರನ್ನು ಮಣಿಸಿದ ಸಾಕ್ಷಿ ಅಂತಿಮ-8ರ ಹಂತ ತಲುಪಿದ್ದರು.. ಅಂತಿಮ-32ರ ಪಂದ್ಯದಲ್ಲಿ ಮಲಿನ್ ಜೊಹಾನ್ನಾ ಮಾಟ್‌ಸನ್ ವಿರುದ್ಧ ಒಂದು ಹಂತದಲ್ಲಿ 0-4 ರಿಂದ ಹಿನ್ನಡೆ ಅನುಭವಿಸಿದ್ದ ಸಾಕ್ಷಿ ಮರು ಹೋರಾಟವನ್ನು ನೀಡಲು ಯಶಸ್ವಿಯಾಗಿದ್ದು, ಅಂತಿಮವಾಗಿ 5-4 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಸಾಕ್ಷಿ ಅವರೊಂದಿಗೆ ಪದಕದ ಬೇಟೆಗೆ ಹೊರಟಿದ್ದ ಭಾರತದ ಕುಸ್ತಿ ತಾರೆ ವಿನೇಶ್ ಫೋಗತ್ ಮಹಿಳೆಯರ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಸನ್ ಯನನ್ ವಿರುದ್ಧ ಪಂದ್ಯದ ವೇಳೆ ಗಾಯಗೊಂಡ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ವಿನೇಶ್ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದ್ದಾಗ ಅವರಿಗೆ ಮಂಡಿನೋವು ಕಾಣಿಸಿಕೊಂಡ ಕಾರಣ ಭಾರೀ ಹಿನ್ನಡೆ ಅನುಭವಿಸಿದ್ದರು.
ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ವಿನೇಶ್ ರೊಮಾನಿಯದ ಎದುರಾಳಿ ಎಮಿಲಿಯಾ ಅಲಿನಾ ವಿರುದ್ಧ 11-0 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು.
ಇತಿಹಾಸ ಬರೆದ ಸಾಕ್ಷಿ: ಸಾಕ್ಷಿ ಮಲಿಕ್ ಒಲಿಂಪಿಕ್ಸ್ ಪದಕ ಜಯಿಸಿದ ಬಾರತದ ಮೊದಲ ಮಹಿಳಾ ಕುಸ್ತಿಪಟು ಹಾಗೂ ದೇಶದ ನಾಲ್ಕನೇ ಮಹಿಳಾ ಕ್ರೀಡಾಪಟು ಒಟ್ಟಿನಲ್ಲಿ ಸಾಕ್ಷಿ ಒಲಿಂಪಿಕ್ಸ್ ನ ಕುಸ್ತಿಯಲ್ಲಿ ಭಾರತದ ಖಾತೆಗೆ ಐದನೆ ಪದಕ ಜಮೆ ಮಾಡಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಭಾರತ ಜಯಿಸಿದ ಪದಕದ ಸಂಖ್ಯೆ 25 ಕ್ಕೆ ಏರಿದೆ.
ಯಾರು ಸಾಕ್ಷಿ ಮಲಿಕ್ ?
ತೂಕ: 64 ಕೆ.ಜಿ
ಎತ್ತರ: 1.62 ಮೀಟರ್
ಜನನ: ಸಾಕ್ಷಿ ಮಲಿಕ್ ಸೆಪ್ಟೆಂಬರ್ 3, 1992 ರಂದು ಹರ್ಯಾಣದ ರೋಹ್ಟಕ್ ನಲ್ಲಿ ಜನಿಸಿದ್ದರು. ಅವರ ತಂದೆ ಸುದೇಶ್ ಮತ್ತು ತಾಯಿ ಸುಖ್ಬೀರ್. ಹೆತ್ತವರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ.
ಮೊಕ್ರಾದ 23 ರ ಹರೆಯದ ಸಾಕ್ಷಿ 12ರ ಹರೆಯದಲ್ಲಿ ಚೋಟು ರಾಮ್ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಈಶ್ವರ್ ದಹಿಯಾ ಮಾರ್ಗದರ್ಶನದಲ್ಲಿ ಕುಸ್ತಿ ತರಬೇತಿ ಪಡೆಯಲಾರಂಭಿಸಿದ್ದರು. ಆರಂಭದಲ್ಲಿ ಅವರಿಗೆ ಕುಸ್ತಿಯ ಪಾಠ ಕಲಿಯಲು ವಿರೋಧ ಇತ್ತು.ಕುಸ್ತಿ ಹುಡುಗರ ಕ್ರೀಡೆ ಎಂಬ ಭಾವನೆ ಸ್ಥಳೀಯರಲ್ಲಿ ಇತ್ತು. ಈ ಕಾರಣದಿಂದಾಗಿ ಬಾಲಕಿ ಸಾಕ್ಷಿಗೆ ಸಾಕ್ಷಿಗೆ ಕುಸ್ತಿಯ ಪಾಠ ಕಲಿಸುವಾಗ ದಹಿಯಾ ಹಲವರಿಂದ ವಿರೋಧ ಎದುರಿಸಿದ್ದರು.
ರಿಯೋ ಒಲಿಂಪಿಕ್ಸ್ ಪಯಣದ ಹಾದಿ
2010: ಜೂನಿಯರ್-ಮಟ್ಟದ ಸ್ಪರ್ಧೆಗಳಲ್ಲಿ ಜಯಿಸಿದ್ದ ಸಾಕ್ಷಿ 2010ರಲ್ಲಿ 59 ಕೆಜಿ ವಿಭಾಗದಲ್ಲಿ 2010 ಕಿರಿಯರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು.
2014: ಡೇವ್ ಷುಲ್ಟ್ಜ್ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ (60 ಕೆಜಿ)ಯಲ್ಲಿ ಚಿನ್ನ ಜಯಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು.
ಆಗಸ್ಟ್ 2014:ಗ್ಲಾಸ್ಗೋದಲ್ಲಿ 2014 ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ, ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭ.
ಸೆಪ್ಟೆಂಬರ್ 2014: ಅವರು ತಾಷ್ಕೆಂಟ್ ವರ್ಲ್ಡ್ ರೆಸ್ಲಿಂಗ್ ಚಾಂಪಿಯಶಿಪ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ.
ಮೇ 2015: ದೋಹಾದಲ್ಲಿ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಕಂಚು:
ಮೇ 2016: ಇಸ್ತಾಂಬುಲ್‌ನಲ್ಲಿ ರಿಯೋ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯ ಸೆಮಿಫೈನಲ್ ನಲ್ಲಿ ಚೀನಾದ ಲ್ಯಾನ್ ಝಾಂಗ್ ಅವರನ್ನು ಸೋಲಿಸಿ ಒಲಿಂಪಿಕ್ಸ್ ಗೆ ಪ್ರವೇಶ
ಜುಲೈ 2016: ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿ 60 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕಂಚು.