ವಿವರ ಒದಗಿಸಲು ಅನುಮತಿ ಇಲ್ಲ ಎಂದ ಮಂಗಳೂರಿನ ಕೆಎಫ್‌ಸಿ

Update: 2016-08-18 06:06 GMT

ಮಂಗಳೂರು, ಆ. 17: ನಗರದ ಮಾಲ್‌ಗಳ ಕೆಎಫ್‌ಸಿ ಮಳಿಗೆಗಳಲ್ಲಿ ಹಲಾಲ್ ಮಾಡಿದ ಮಾಂಸ ಆಹಾರ ಉತ್ಪನ್ನಗಳ ಬಗ್ಗೆ ವಿವರಣೆ ಒದಗಿಸಲು ತಮಗೆ ಅಧಿಕೃತ ಅನುಮತಿ ಇಲ್ಲ ಎಂದು ಕೆಎಫ್‌ಸಿ ಪ್ರಾದೇಶಿಕ ಮ್ಯಾನೇಜರ್ ಉಮರ್ ಹಾರೂನ್ ಪ್ರತಿಕ್ರಿಯೆ ನೀಡಿದ್ದಾರೆ.

‘‘ಉತ್ತರ ಪ್ರದೇಶದ ಬರೇಲಿಯ ಕೆಎಫ್‌ಸಿ ಮಳಿಗೆಯಲ್ಲಿ ಹಲಾಲ್ ಮಾಡದ ಕೋಳಿ ಮಾಂಸದ ಆಹಾರೋತ್ಪನ್ನಗಳನ್ನು ಬಳಸುತ್ತಿದ್ದು, ಅವುಗಳ ಸೇವನೆ ಮುಸ್ಲಿಮರಿಗೆ ನ್ಯಾಯಸಮ್ಮತವಲ್ಲ’’ ಎಂದು ಮುಸ್ಲಿಂ ಧಾರ್ಮಿಕ ಗುರುಗಳು ನೀಡಿರುವ ಹೇಳಿಕೆಗಳಿಂದಾಗಿ ಈ ಬಗ್ಗೆ ಸ್ಪಷ್ಟೀಕರಣ ಕೇಳಲು ಹಾರೂನ್ ಅವರನ್ನು ಸಂಪರ್ಕಿಸಿ ಕೆಎಫ್‌ಸಿಗೆ ಸರಬರಾಜು ಆಗುತ್ತಿರುವ ಮಾಂಸದ ಬಗ್ಗೆ ಪ್ರಮಾಣ ಪತ್ರದ ಕುರಿತಂತೆ ಕೇಳಿದಾಗ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸ್ತುತ ನಗರದ ಸಿಟಿ ಸೆಂಟರ್‌ನಲ್ಲಿರುವ ಕೆಎಫ್‌ಸಿ ಮಳಿಗೆ, ಕದ್ರಿ ಹಾಗೂ ಮಣಿಪಾಲದಲ್ಲಿನ ಕೆಎಫ್‌ಸಿ ಮಳಿಗೆಗಳಿಗೆ ಗೋದ್ರೆಜ್ ಕಂಪೆನಿಯಿಂದ ಕೋಳಿ ಮಾಂಸ ಸರಬರಾಜು ಆಗುತ್ತಿದ್ದು, ಸರಬರಾಜು ಆಗುತ್ತಿರುವ ಮಾಂಸ ಹಲಾಲ್ ಆಗಿದೆ ಎಂದು ಮಾತ್ರ ಹೇಳಿದ್ದಾರೆ. ಆದರೆ, ಈ ಬಗ್ಗೆ ಗೋದ್ರೆಜ್ ಕಂಪೆನಿಯು ಹಲಾಲ್ ಎಂದು ಎಲ್ಲಿಂದ ಪ್ರಮಾಣಪತ್ರ ಪಡೆದಿದೆ?,ಯಾವಾಗ ಪಡೆದಿದೆ? ಇತ್ಯಾದಿ ಪ್ರಶ್ನೆಗಳಿಗೆ ಪ್ರಮಾಣಪತ್ರದ ವಿವರ ನೀಡಲು ನಮಗೆ ಅಧಿಕೃತವಾಗಿ ಅನುಮತಿ ಇಲ್ಲ ಎಂದು ಹೇಳಿದ್ದಾರೆ.

ದೂರವಾಗದ ಗ್ರಾಹಕರ ಗೊಂದಲ

ಇತ್ತೀಚೆಗೆ ಉತ್ತರ ಪ್ರದೇಶದ ಬರೇಲಿಯ ಕೆಎಫ್‌ಸಿ ಮಳಿಗೆಯೊಂದರಲ್ಲಿ ಹಲಾಲ್ ಮಾಡದ ಮಾಂಸಾಹಾರ ಉತ್ಪನ್ನಗಳ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬರೇಲಿಯ ಧಾರ್ಮಿಕ ಮುಸ್ಲಿಂ ಗುರುಗಳನ್ನೊಳಗೊಂಡ ತಂಡವೊಂದು ಕೆಎಫ್‌ಸಿಗೆ ಭೇಟಿ ನೀಡಿತ್ತು. ಅಲ್ಲಿ ಮಾರಾಟವಾಗುತ್ತಿರುವ ಮಾಂಸದ ಉತ್ಪನಗಳಿಗೆ ಸೂಕ್ತ ಹಲಾಲ್ ಸರ್ಟಿಫಿಕೇಟ್ ಇಲ್ಲ ಎಂದು ಖಚಿತಪಡಿಸಿಕೊಂಡಿತ್ತು.

ಈ ಬಗ್ಗೆ ಧಾರ್ಮಿಕ ಗುರುಗಳು ಹೇಳಿಕೆಯೊಂದನ್ನು ನೀಡಿ ಅಂತಹ ಉತ್ಪನ್ನಗಳನ್ನು ಸೇವಿಸದಂತೆ ಮುಸ್ಲಿಮರಿಗೆ ಕರೆ ನೀಡಿದ್ದರು. ಮುಸ್ಲಿಂ ಧಾರ್ಮಿಕ ಗುರುಗಳ ಈ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹಿನ್ನೆಲ್ಲೆಯಲ್ಲಿ ಸಹಜವಾಗಿಯೇ ನಗರದ ಮಾಲ್‌ಗಳಲ್ಲಿರುವ ಕೆಎಫ್‌ಸಿ ಮಳಿಗೆಗಳಲ್ಲಿ ಇಂತಹ ಆಹಾರ ಉತ್ಪನ್ನಗಳ ಸೇವನೆಗೆ ಸಂಬಂಧಿಸಿ ಗ್ರಾಹಕರು ಗೊಂದಲಕ್ಕೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News