ಅಪಘಾತ ಎಂದು ಹೇಳಲು ಪೂಜಾರಿ ಮನೆಯವರ ಮೇಲೆ ಒತ್ತಡ !
ಉಡುಪಿ, ಆ.18: ಈವರೆಗೆ ಗೋರಕ್ಷಕರ ದಾಳಿಗೆ ಅಲ್ಪಸಂಖ್ಯಾತರು ಹಾಗೂ ದಲಿತರು ತುತ್ತಾಗುತ್ತಿದ್ದರೆ ಇದೀಗ ‘ಗೋರಕ್ಷಕ’ ಸಂಘಪರಿವಾರದ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತನನ್ನೇ ಬಲಿಪಡೆದುಕೊಂಡಿದ್ದಾರೆ. ಸಂಘಪರಿವಾರದ ಮುಖಂಡರ ಪ್ರಚೋದನಕಾರಿ ಮಾತುಗಳು ತಮ್ಮದೇ ಕಾರ್ಯಕರ್ತನ ಜೀವವನ್ನು ಬಲಿಪಡೆದುಕೊಂಡದ್ದು ದುರಂತ ಎಂಬ ಅಭಿಪ್ರಾಯ ಉಡುಪಿ ಜಿಲ್ಲೆಯ ನಾಗರಿಕರಿಂದ ಕೇಳಿಬರುತ್ತಿದೆ.
ಗೋಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದ ಸಂಘಪರಿವಾರದ ಸುಮಾರು 30 ಮಂದಿ ಕಾರ್ಯಕರ್ತರು ಜಾನುವಾರು ವ್ಯಾಪಾರದಲ್ಲಿ ದಲ್ಲಾಳಿಯಾಗಿ ಕೆಲಸ ನಿರ್ವಹಿಸುತ್ತಿದ್ದ, ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯವರಿಗೆ ಬುಧವಾರ ರಾತ್ರಿ ವೇಳೆ ಬರ್ಬರವಾಗಿ ಹಲ್ಲೆ ನಡೆಸಿತ್ತು. ತಡೆಯಲು ಬಂದ ಯುವಕ ಅಕ್ಷಯ್ ಎಂಬಾತನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಪ್ರವೀಣ್ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
‘‘ಸಂಜೆ ವೇಳೆಗೆ ಏಕಾಏಕಿ ಬಂದ ಸುಮಾರು 30 ಮಂದಿ ಸಂಘಪರಿವಾರದ ಕಾರ್ಯಕರ್ತರು ಏಕಾಏಕಿ ಪ್ರವೀಣ್ ಪೂಜಾರಿಯವರ ಮೇಲೆ ಹಲ್ಲೆ ನಡೆಸಿದರು. ತಡೆಯಲು ಬಂದ ಇನ್ನೋರ್ವ ಯುವಕ ಅಕ್ಷಯ್ ಎಂಬಾತನ ಮೇಲೂ ಹಲ್ಲೆ ನಡೆಸಿದರು. ಈ ಸಂದರ್ಭ ಪ್ರವೀಣ್ ಪೂಜಾರಿ ಅವರು, ನಾನೋರ್ವ ಬಿಜೆಪಿಯ ಕಾರ್ಯಕರ್ತ, ಚುನಾವಣೆಗಾಗಿ ನಾನು ಬಹಳಷ್ಟು ಕೆಲಸ ಮಾಡಿದ್ದೇನೆ ಎಂದು ಬೇಡಿಕೊಂಡರೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು.ಬಳಿಕ ಅವರಿಬ್ಬರನ್ನೂ ಅಲ್ಲಿಂದ ಕರೆದೊಯ್ದರು. ಈ ಸಂದರ್ಭ ಸ್ಥಳದಲ್ಲಿ ಘಟನೆಗೆ ಸಾಕ್ಷಿಗಳಾಗಿದ್ದ ಸಾರ್ವಜನಿಕರ ಮುಂದೆ ‘ಯಾರದರೂ ಈ ಬಗ್ಗೆ ಸಾಕ್ಷಿ ಹೇಳಿದರೆ ಎಚ್ಚರ’ ಎಂದು ಬೆದರಿಕೆ ಒಡ್ಡಿದರು’’ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮಧ್ಯೆ ಮೃತಪಟ್ಟ ಯುವಕ ಪ್ರವೀಣ್ ಪೂಜಾರಿಯವರ ಮನೆಮಂದಿ ಹಾಗೂ ಗಾಯಾಳು ಅಕ್ಷಯ್ ಅವರ ಮನೆಮಂದಿಗೆ ಬೆದರಿಕೆ ಒಡ್ಡಿರುವ ಆರೋಪಿಗಳು "ಇದೊಂದು ಅಪಘಾತ" ಎಂದು ಹೇಳುವಂತೆ ತೀವ್ರ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.
ಇಂತಹ ಘಟನೆಗಳು ನಡೆಯಲು ಸಂಘಪರಿವಾರದ ಮುಖಂಡರ ಪ್ರಚೋದನಕಾರಿ ಭಾಷಣಗಳೇ ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಸುಮಾರು 20 ದಿನಗಳ ಹಿಂದೆ ಉಡುಪಿ ಬಳಿಯ ಕೊಕ್ಕರ್ಣೆಯಲ್ಲಿ ಹಿಂದೂ ಸಮಾಜೋತ್ಸವ ನಡೆದಿತ್ತು. ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಲಾಗಿತ್ತು. ಸಮಾಜೋತ್ಸವ ನಡೆದ 5 ದಿನಗಳ ಬಳಿಕ ಕೊಕ್ಕರ್ಣೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಘಟಕ ಕಾರ್ಯಾರಂಭ ಮಾಡಿತ್ತು. ಇದು ಸಂಘಪರಿವಾರದ ಮುಖಂಡರ ಪ್ರಚೋದನಕಾರಿ ಭಾಷಣದ ಪರಿಣಾಮ. ಯುವಕರು ಪ್ರಚೋದನಕಾರಿ ಮಾತುಗಳಿಂದ ಪ್ರಭಾವಿತರಾಗಿ ಇಂತಹ ದುಷ್ಕೃತ್ಯಗಳಿಗೆ ಇಳಿಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಗಣೇಶ್ ಮೊಗವೀರಪೇಟೆ, ಉಮೇಶ್ ನಾಯ್ಕಾ, ಶ್ರೀಕಾಂತ್ ಕುಲಾಲ್, ಸುಖೇಶ್, ಪ್ರಕಾಶ ಶೇರಿಗಾರ್ ಸಹಿತ 17 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಇಂತಹ ಕೃತ್ಯಗಳಿಗೆ ಸಂಘಪರಿವಾರದ ಮುಖಂಡ, ಸಂತೆಕಟ್ಟೆಯಲ್ಲಿ ಪೆಟ್ರೋಲ್ ಬಂಕ್ ಒಂದನ್ನು ಲೀಸ್ ಆಧಾರದಲ್ಲಿ ನಡೆಸುತ್ತಿರುವ ಅರವಿಂದ ಕೋಟೇಶ್ವರ ಎಂಬಾತನ ಕುಮ್ಮಕ್ಕು ಇದೆ ಎಂದು ಜನರು ದೂರಿದ್ದಾರೆ. ಯುವಕರನ್ನು ಇಂತಹ ಕೃತ್ಯಗಳಿಗೆ ಪ್ರೇರೇಪಿಸಿ ಈ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.