×
Ad

ಸ್ವಚ್ಚತೆ ಮತ್ತು ಪರಿಸರ ಪರ ಕಾಳಜಿಗೆ ಸ್ಪಂದನೆ: ಪಿ.ಜಯರಾಮ್ ಭಟ್

Update: 2016-08-18 19:02 IST

ಮಂಗಳೂರು ವಿವಿ ಕೆರಿಯರ್ ಆವರಣದಲ್ಲಿ ಉದ್ಯಾನವನ ಉದ್ಘಾಟನೆ ಕೊಣಾಜೆ, ಆ.18: ಶೈಕ್ಷಣಿಕ ಹಾಗೂ ಪರಿಸರಕ್ಕೆ ಪೂರಕವಾಗಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವಂತಹ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳಿಗೆ ಕರ್ಣಾಟಕ ಬ್ಯಾಂಕ್ ಸದಾ ಸ್ಪಂದಿಸುತ್ತಿದೆ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ್ ಭಟ್ ತಿಳಿಸಿದ್ದಾರೆ.

ಅವರು ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿರುವ ಕೆರಿಯರ್ ಪ್ರಯೋಗಶಾಲೆಯ ಆವರಣದಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ನಿರ್ಮಿಸಲಾದ ಉದ್ಯಾನವನವನನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ಈಗಾಗಲೇ ಎಟಿಎಂ ಆರಂಭಿಸಲಾಗಿದ್ದು ಆರು ತಿಂಗಳ ಹಿಂದೆ ಕೆಎಸ್‌ಎನ್ ಅಡಿಗ ಸ್ಮಾರಕ ಬಸ್ ತಂಗುದಾಣ ನಿರ್ಮಿಸಲಾಗಿದೆ. ಈ ಸಂದಭರ್ ಬಂದ ಉದ್ಯಾನವನದ ಬೇಡಿಕೆಯನ್ನು ಬ್ಯಾಂಕ್‌ನ ಸಾಮಾಜಿಕ ಸೇವೆ ಯೋಜನೆಯಡಿ ಪೂರೈಸಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿನ ಸಿಜೆಎಂ ಎಂ.ಎಸ್.ಮಹಾಬಲೇಶ್ ಮಾತನಾಡಿ, ಮಂಗಳೂರು ವಿ.ವಿ.ಯು 350 ಎಕರೆ ಜಮೀನು ಹೊಂದಿದ್ದು, ನಗರದ ಬಗ್ಗೆ ಹೇಳುವುದಾದರೆ ಇದು ದೊಡ್ಡ ಪ್ರಮಾಣವಾಗಿದೆ. ಪರಿಸರ ಸ್ವಚ್ಛತೆ ಹಾಗೂ ಸೌಂದರ್ಯ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಅಗತ್ಯವಿದೆ. ಕ್ಯಾಂಪಸ್ ಆವರಣ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ.ಕೆ.ಬೈರಪ್ಪ ಮಾತನಾಡಿ, ದೇಶದ ಮಟ್ಟದ ಮಾನ್ಯತೆ ಪಡೆದಿರುವ ಕೆರಿಯರ್ ಅತ್ಯುತ್ತಮ ಪ್ರಯೋಗಶಾಲೆ ಎನಿಸಿದೆ. ಅಂತಾರಾಷ್ಟ್ರೀಯ ಮಾನ್ಯತೆ ಬಂದರೆ ವಿದೇಶಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು. ವಿವಿ ಹೊಂದಿರುವ 350 ಎಕರೆ ಜಮೀನಿನಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯತೆ ಇದ್ದು ಪ್ಲಾಸ್ಟಿಕ್ ಮುಕ್ತ ವಲಯ ಘೋಷಣೆ ಬಗ್ಗೆ ಪ್ರಯತ್ನಿಸಲಾಗುವುದು. ಅಲ್ಲದೆ ಎಲ್ಲಾ ವಿಭಾಗ ಕಟ್ಟಡದ ಮುಂದೆ ಹಸಿರು ಗಾರ್ಡನ್ ನಿರ್ಮಾಣದಿಂದ ಕ್ಯಾಂಪಸ್ ಇನ್ನಷ್ಟು ಸುಂದರಗೊಳ್ಳಲಿದೆ ಎಂದರು.

ಕರ್ಣಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ ದೇಶಪಾಂಡೆ, ಮಂಗಳೂರು ವಿ.ವಿ. ಕುಲಸಚಿವ ಪ್ರೊ.ಲೋಕೇಶ್, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News