ಗೋರಕ್ಷಕರ ಅಮಾನುಷ ಕೃತ್ಯಕ್ಕೆ ಎಸ್‌ಡಿಪಿಐ ಖಂಡನೆ
ಮಂಗಳೂರು, ಆ.18: ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಎಂಬಲ್ಲಿ ಜಾನುವಾರು ಸಾಗಾಟದ ಆರೋಪ ಹೊರಿಸಿ ಪ್ರವೀಣ್ ಪೂಜಾರಿ ಎಂಬವರನ್ನು ಸಂಘಪರಿವಾರದ ಕಾರ್ಯಕರ್ತರು ಹತ್ಯೆಗೈದ ಘಟನೆಯನ್ನು ಎಸ್‌ಡಿಪಿಐನ ದ.ಕ. ಜಿಲ್ಲಾ ಸಮಿತಿ ಖಂಡಿಸಿದೆ.
ಕಳೆದ ಹಲವಾರು ದಿನಗಳಿಂದ ದೇಶಾದ್ಯಂತ ಗೋರಕ್ಷಣೆಯ ಹೆಸರಿನಲ್ಲಿ ಫ್ಯಾಶಿಸ್ಟ್ ಶಕ್ತಿಗಳು ದಲಿತರ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಮೇಲೆ ನಿರಂತರವಾಗಿ ಅಮಾನುಷವಾಗಿ ದಾಳಿ ನಡೆಸುತ್ತಿದ್ದು, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಇದನ್ನು ತಡೆಯಲು ಸಾಧ್ಯವಾಗದೇ ಇರುವುದು ದುರಂತವಾಗಿದೆ. ಚಿಕ್ಕಮಂಗಳೂರಿನ ಕೊಪ್ಪದಲ್ಲಿ ದನದ ಮಾಂಸ ಮನೆಯಲ್ಲಿದೆ ಎಂದು ಹೇಳಿ ದಲಿತರ ಮೇಲೆ ದಾಳಿ ನಡೆಸಿದ ಶಕ್ತಿಗಳೇ ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ಜಾನುವಾರು ಸಾಗಾಟದ ಆರೋಪ ಹೊರಿಸಿ ಓರ್ವನನ್ನು ಹತ್ಯೆಗೈದಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆಗಳು, ದೌರ್ಜನ್ಯಗಳು ಹೆಚ್ಚುತ್ತಿವೆ. ಆದ್ದರಿಂದ ಈ ರೀತಿ ಗೂಂಡಾ ಪ್ರವರ್ತನೆ ಮಾಡುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ಎಸ್‌ಡಿಪಿಐನ ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.