ಸ್ಕೂಟರ್‌ನಿಂದ 20 ಲಕ್ಷ ರೂ. ಎಗರಿಸಿದ್ದ ಆರೋಪಿಯ ಬಂಧನ

Update: 2016-08-18 17:35 GMT

ಮಂಗಳೂರು, ಆ. 18: ನಗರದ ಆರ್‌ಟಿಒ ಕಚೇರಿಯ ಹಿಂದುಗಡೆ ಪಾರ್ಕ್ ಮಾಡಿದ್ದ ವ್ಯಕ್ತಿಯೊಬ್ಬರ ಸ್ಕೂಟರ್‌ನಿಂದ 20 ಲಕ್ಷ ರೂ. ಕಳವು ಮಾಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ತಿರುಚನಾಪಳ್ಳಿಯ ಮಲೈಪಟ್ಟಿ ವಿಲೇಜ್‌ನ ಮಧುಸೂದನ್ (40)ನನ್ನು ಬಂಧಿಸಲಾಗಿದ್ದು ಆತನಿಂದ 10 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.

ಆ.6ರಂದು ಸಂಜೆ ರಾಜೇಶ್ ಅವರು ನಗರದ ಆರ್‌ಟಿಒ ಕಚೇರಿಯ ಹಿಂದುಗಡೆ ತನ್ನ ಸ್ಕೂಟರ್ ಪಾರ್ಕ್ ಮಾಡಿ, ಅದರ ಸೀಟ್‌ನಡಿಯಲ್ಲಿ 20 ಲಕ್ಷ ರೂ. ನಗದು ಇಟ್ಟು ತೆರಳಿದ್ದರು. ಈ ವೇಳೆ ಸ್ಕೂಟರ್‌ನ ಲಾಕ್ ಮುರಿದ ಕಳ್ಳರು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ದಕ್ಷಿಣ ಠಾಣೆಯ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ ಆ. 17ರಂದು ಬೆಳಗ್ಗೆ ಪ್ರಕರಣದ ಆರೋಪಿಯಾದ ಮಧುಸೂದನ್‌ನನ್ನು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆದು ಕಳವು ಮಾಡಿದ ಹಣದ ಪೈಕಿ 10ಸಾವಿರ ರೂ.ನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ತಮಿಳುನಾಡು ರಾಜ್ಯದ ತಿರುಚನಾಪಳ್ಳಿ ಜಿಲ್ಲೆಯ ರಾಮೋಜಿ ನಗರದವರಾಗಿದ್ದು, ತಂಡದಲ್ಲಿ ಸುಮಾರು 13ರಿಂದ 15 ಮಂದಿ ಇದ್ದು, ನಗದು ವ್ಯವಹಾರ ನಡೆಯುವ ಕೇಂದ್ರಗಳನ್ನು ಗುರಿಯನ್ನಾಗಿಸಿಕೊಂಡು ಕಾರ್ಯಾಚರಣೆಗೆ ಇಳಿಯುತ್ತಿದ್ದರು ಎನ್ನಲಾಗಿದೆ.

ಪೊಲೀಸ್ ಆಯುಕ್ತ ಚಂದ್ರಶೇಖರ್, ಉಪ ಆಯುಕ್ತರಾದ ಶಾಂತರಾಜು, ಡಾ.ಸಂಜೀವ ಎಂ. ಪಾಟೀಲ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಶೃತಿ ಎಸ್.ಎಸ್.ರ ಮಾರ್ಗದರ್ಶನದಲ್ಲಿ ಪಾಂಡೇಶ್ವರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ಅವರ ನಿರ್ದೇಶನದಂತೆ ಉಪನಿರೀಕ್ಷಕ ಅನಂತ ಮುರ್ಡೇಶ್ವರ ಅವರು ಕಾರ್ಯಾಚರಣೆ ನಡೆಸಿದ್ದರು. ಸಿಬ್ಬಂದಿ ವಿಶ್ವನಾಥ, ಗಂಗಾಧರ, ಧನಂಜಯ ಗೌಡ, ಶೇಖರ್ ಗಟ್ಟಿ, ಚಂದ್ರ ಶೇಖರ, ನೂತನ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News