'ನೀರು ಕೇಳಿದರೂ ಕೊಡದೆ ಹೊಡೆದು ಸಾಯಿಸಿದರು’
ಬ್ರಹ್ಮಾವರ, ಆ.18: ‘ಹಲ್ಲೆ ನಡೆಸುವಾಗ ಪ್ರವೀಣ್ ಪೂಜಾರಿ ಕಾಡಿಬೇಡಿದರು. ದುಷ್ಕರ್ಮಿಗಳು ಯಾವುದೇ ಮನುಷ್ಯತ್ವ ತೋರದೆ ಹೊಡೆದರು. ತನ್ನ ಪರಿಚಯ ಹೇಳಿಕೊಂಡರೂ ಕಿವಿಗೊಡದೆ ಥಳಿಸಿದರು. ನಾನು ಸಾಯ್ತ ಇದ್ದೇನೆ. ನೀರು ಕೊಡಿ ಅಂತ ಗೋಗೆರೆದರೂ ಕ್ಯಾರೇ ಎನ್ನದೆ ಹಲ್ಲೆಗೈದರು.’
ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪ್ರವೀಣ್ ಪೂಜಾರಿಯನ್ನು ಅಮಾನುಷವಾಗಿ ಹಲ್ಲೆಗೈದು ಕೊಲೆ ಮಾಡಿದ ರೀತಿಯ ಬಗ್ಗೆ ಅವರ ತಂಗಿ ಪ್ರಮೀಳಾರ ಗಂಡ, ಸಾಣೂರು ಗ್ರಾಪಂ ಸದಸ್ಯ ಪ್ರಸಾದ್ ಪೂಜಾರಿ ಮಾಧ್ಯಮದವರ ಮುಂದೆ ದು:ಖ ತೋಡಿಕೊಂಡರು.
ಸ್ಥಳೀಯವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಪ್ರವೀಣ್ ಪೂಜಾರಿ ಎಲ್ಲರಿಗೂ ಬೇಕಾದವರು. ಸೌಮ್ಯ ಸ್ವಭಾವದ ಇವರು, ತಮ್ಮ ತೀರಾ ಬಡಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಅಲ್ಲದೆ ಪ್ರವೀಣ್ ತಂದೆ ಹಾಗೂ ತಾಯಿ ಕುಟುಂಬಸ್ಥರು ಕೂಡ ಒಂದು ಹೊತ್ತಿನ ಅನ್ನಕ್ಕೂ ತತ್ವಾರ ಪಡುವಂತಹ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಡೀ ಕುಟುಂಬಕ್ಕೆ ಪ್ರವೀಣ್ ಪೂಜಾರಿಯೇ ಆಧಾರವಾಗಿದ್ದನು ಎಂದು ಅವರು ತಿಳಿಸಿದರು.
ದುಷ್ಕರ್ಮಿಗಳು ರಾಡು, ದೊಣ್ಣೆ, ಕೈಕಾಲಿನಿಂದ ಹಲ್ಲೆ ನಡೆಸಿದ ಪರಿಣಾಮ ಪ್ರವೀಣ್ ಪೂಜಾರಿಯ ಬೆನ್ನಿನ ಭಾಗ, ಕೈ, ಕಾಲು, ಹೊಟ್ಟೆಯ ಭಾಗಕ್ಕೆ ತೀವ್ರ ಗಾಯವಾಗಿದೆ. ಇಷ್ಟು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವ ಬದಲು ಕೆಂಜೂರಿನಲ್ಲಿ ಬಿಸಾಡಿ ಹೋಗಿದ್ದಾರೆ. ಇವರ ನೀಚ ಕೃತ್ಯ ಇಡೀ ಮಾನವ ಕುಲ ಖಂಡಿಸುವಂತದ್ದು ಎಂದು ಅವರು ಕಿಡಿ ಕಾರಿದರು.
ಸ್ಥಳೀಯ ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ ಪತ್ರಿಕೆಯೊಂದಿಗೆ ಮಾತನಾಡಿ, ಪ್ರವೀಣ್ ಪೂಜಾರಿ ಪ್ರತಿ ಚುನಾವಣೆಯಲ್ಲಿ ನನ್ನ ವಿರುದ್ಧವಾಗಿ ಕೆಲಸ ಮಾಡುತ್ತಿದ್ದ. ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದ ಆತ ಕೆಟ್ಟ ಹುಡುಗ ಅಲ್ಲ. ಎಲ್ಲರಿಗೂ ಬೇಕಾದವನಾಗಿದ್ದನು. ಇದೊಂದು ಅಮಾನುಷ ಕೃತ್ಯ ಎಂದು ಹೇಳಿದ್ದಾರೆ.ಪ್ರವೀಣ್ ನನ್ನ ಕ್ಷೇತ್ರ ವ್ಯಾಪ್ತಿಯ ಹಾಗೂ ನನ್ನ ಗಂಡನ ಮನೆಯ ಸಮೀಪದ ನಿವಾಸಿ. ಅವನನ್ನು 20ವರ್ಷಗಳಿಂದ ನಾನು ಬಲ್ಲೆ. ವಿರೋಧ ಪಕ್ಷದಲ್ಲಿದ್ದರು ಒಳ್ಳೆಯ ಸಂಬಂಧ ನಮ್ಮ ಮಧ್ಯೆ ಇತ್ತು. ಕಾನೂನು ಕೈಗೆತ್ತಿ ಕೊಳ್ಳಲು ಯಾರಿಗೂ ಅವಕಾಶ ಇಲ್ಲ. ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ಪ್ರಾಣಿಗಿಂತಲೂ ಕೀಳಾಗಿ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮದುವೆಗೆ ಹೆಣ್ಣು ನೋಡಿದ್ದ
ತೀರಾ ಬಡಕುಟುಂಬದಿಂದ ತುಂಬಾ ಕಷ್ಟದಿಂದ ಮೇಲೆ ಬಂದಿದ್ದ ಪ್ರವೀಣ್ ಪೂಜಾರಿ ವ್ಯಾಪಾರದಲ್ಲಿ ಯಶಸ್ಸು ಸಾಧಿಸಿದ ಬಳಿಕ ಮದುವೆ ಆಗಲು ಇಚ್ಛೆ ವ್ಯಕ್ತಪಡಿಸಿದ್ದನು. ಅದರಂತೆ ಅವರ ಕುಟುಂಬಸ್ಥರು ಆತನಿಗೆ ಹುಡುಗಿ ಹುಡುಕುತ್ತಿದ್ದರು. ಇತ್ತೀಚೆಗಷ್ಟೆ ತನ್ನ ಬಾವನ ಪರಿಚಯದಲ್ಲಿ ಕಾರ್ಕಳದ ಹುಡುಗಿಯನ್ನು ನೋಡಿ ಬಂದ ಪ್ರವೀಣ್ ಪೂಜಾರಿ, ಆಕೆಯನ್ನು ಒಪ್ಪಿ ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡುತ್ತಿದ್ದನು.
ಮಂಗಳೂರು ಐಜಿಪಿ ಭೇಟಿ
ಈ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಗುರುವಾರ ಬ್ರಹ್ಮಾವರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಧ್ಯಾಹ್ನದ ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿದ ಐಜಿಪಿ, ಈ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಆಸ್ಪತ್ರೆಗೆ ತೆರಳಿ ಗಾಯಗೊಂಡಿ ರುವ ಅಕ್ಷಯ್ ಅವರಿಂದ ಪ್ರಕರಣದ ವಿವರವನ್ನು ಪಡೆದರು.