×
Ad

ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ

Update: 2016-08-18 23:45 IST

ಶ್ರೀನಗರ, ಆ.18: ಕಾಶ್ಮೀರದ ಪುಲ್ವಾನ ಜಿಲ್ಲೆಯಲ್ಲಿ ಸೇನಾ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಸರಕಾರಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮೃತಪಟ್ಟಿದ್ದು, ಇತರ 18 ಮಂದಿ ಗಾಯಗೊಂಡಿದ್ದಾರೆ.

ಇತ್ತೀಚೆಗೆ ಈ ಪ್ರದೇಶದಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಒಬ್ಬ ಯುವಕನಿಗಾಗಿ ಭದ್ರತಾ ಪಡೆ ಶೋಧ ಕಾರ್ಯಾಚರಣೆಗೆ ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಆಗ ಘರ್ಷಣೆ ಸಂಭವಿಸಿತು ಎಂದು ಸ್ಥಳೀಯರು ಹೇಳುತ್ತಾರೆ. ಪೊಲೀಸ್ ವರದಿಗಳ ಪ್ರಕಾರ, ಶಬೀರ್ ಅಹ್ಮದ್ ಮೊಂಗಾ ಎಂಬ ಗುತ್ತಿಗೆ ಉಪನ್ಯಾಸಕ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. 18 ಮಂದಿ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪುಲ್ವಾನ ಘರ್ಷಣೆ ಬಗ್ಗೆ ಎಲ್ಲ ವಿವರಗಳನ್ನು ಕಲೆಹಾಕಿ ಅಧಿಕೃತ ಹೇಳಿಕೆಯನ್ನು ವಾರಾಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಅನಂತನಾಗ್, ಪಾಂಪೋರ್, ಪುಲ್ವಾನ ಸೇರಿದಂತೆ ಇಡೀ ಶ್ರೀನಗರ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಬುಧವಾರ ಪ್ರತ್ಯೇಕತಾವಾದಿ ಸಂಘಟನೆಗಳು ವಿಶ್ವಸಂಸ್ಥೆ ಕಚೇರಿಗೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಪ್ರತಿಯೊಬ್ಬರ ಚಲನವಲನಗಳ ಬಗ್ಗೆ ಹದ್ದಿನ ಕಣ್ಣು ಇರಿಸಿದ್ದವು.
ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಿದ 41 ದಿನಗಳ ಬಳಿಕ ಗುರುವಾರವೂ ಶಾಲಾ ಕಾಲೇಜುಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳು ಮುಚ್ಚಿದ್ದವು. ಕಾಶ್ಮೀರ ಕಣಿವೆಯಲ್ಲಿ ಮೊಬೈಲ್, ಇಂಟರ್ನೆಟ್, ದೂರವಾಣಿ ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ಗುರುವಾರ ಮುಂಜಾನೆ ಬ್ರಾಡ್‌ಬ್ಯಾಂಡ್ ಸೇವೆ ಪುನರಾರಂಭಿಸಲಾಗಿದೆ.
ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಅವರನ್ನು ಜುಲೈ 8ರಂದು ಹತ್ಯೆ ಮಾಡಿದ ಬಳಿಕ ನಡೆದ ಹಿಂಸಾಚಾರದಲ್ಲಿ 66 ಮಂದಿ ಮೃತಪಟ್ಟು 5,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News