ನಕಲಿ ಗೋರಕ್ಷಕ ಸಂಘಟನೆ ನಿಷೇಧಿಸಲು ಆಗ್ರಹಿಸಿ ಧರಣಿ
Update: 2016-08-19 00:12 IST
ಕುಂದಾಪುರ, ಆ.18: ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸಿ, ಕೊಲೆಗಡುಕ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಡಿವೈಎಫ್‌ಐ ತಾಲೂಕು ಸಮಿತಿ ಇಂದು ಕುಂದಾಪುರದಲ್ಲಿ ಧರಣಿ ನಡೆಸಿತು.
ಗೋರಕ್ಷಣೆ ಹೆಸರಿನಲ್ಲಿ ಪ್ರವೀಣ್ ಪೂಜಾರಿಯವರ ಕೊಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಈ ಸಂದರ್ಭ ಡಿವೈಎಫ್‌ಐ ಮಾಜಿ ಮುಖಂಡ ಎಚ್. ನರಸಿಂಹ, ತಾಲೂಕು ಅಧ್ಯಕ್ಷ ಸಂತೋಷ ಹೆಮ್ಮಾಡಿ, ಉಪಾಧ್ಯಕ್ಷ ಸುರೇಶ್ ಕಲ್ಲಾಗಾರ್, ರವಿ ವಿ.ಎಂ., ರಾಜಾ ಬಿ.ಟಿ.ಆರ್., ಅಕ್ಷಯ ವಡೇರಹೋಬಳಿ, ಗಣೇಶ್ ಕಲ್ಲಾಗರ, ಅಶೋಕ ಹಟ್ಟಿಯಂಗಡಿ, ಸತೀಶ ತೆಕ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.