ಮೋದಿ ಅಧಿಕಾರಕ್ಕೆ ಬಂದ ನಂತರ ದಲಿತರ, ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆ: ಇಬ್ರಾಹೀಂ ಕೋಡಿಜಾಲ್

Update: 2016-08-19 06:10 GMT

ಮಂಗಳೂರು, ಆ.19: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗೋಸಂರಕ್ಷಣೆಯ ಹೆಸರಿನಲ್ಲಿ ದಲಿತರ, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಸಂರಕ್ಷಣೆಯ ನೆಪದಲ್ಲಿ ಬ್ರಹ್ಮಾವರದ ಕೆಂಜೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯವರನ್ನು ಹತ್ಯೆಗೈದ ಸಂಘಪರಿವಾರದ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿದರು.

ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣವು ದೇಶದ ಕಾನೂನು, ಸಂವಿಧಾನ ಮತ್ತು ಸಂಸ್ಕೃತಿಗೆ ವಿರುದ್ಧವಾದ ಕೆಲಸ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗೋರಕ್ಷಕರಿಂದ ದಲಿತರ, ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಸಂಘಪರಿವಾರವು ಉದ್ರೇಕಕಾರಿ ಭಾಷಣದ ಮೂಲಕ ಯುವಕರನ್ನು ಉದ್ರೇಕಗೊಳಿಸಿ ಕೊಲೆ ಮಾಡಿಸುತ್ತಿದೆ. ಇಂತಹ ಘಟನೆಗಳು ಪ್ರಜಾಪ್ರಭುತ್ವ, ದೇಶದ ಸಂಸ್ಕೃತಿಗೆ ಮಾರಕ. ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದು ಹೇಳಿದರು.

ಸಂಘಪರಿವಾರದ ಪುಂಡಾಟಿಕೆಯಿಂದ ಬಿಲ್ಲವ ಸಮಾಜಕ್ಕೆ ಸೇರಿದ ಬಡ ಯುವಕ ಹತ್ಯೆಗೀಡಾಗಿದ್ದಾನೆ. ಹತ್ಯೆಯಾದ ಪ್ರವೀಣ್ ಪೂಜಾರಿ ಉತ್ತಮ ಸಮಾಜಸೇವಕನಾಗಿದ್ದ. ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು ಎಂದು ಎಲ್ಲಾ ಧರ್ಮಗಳು ಬೋಧಿಸಿದ್ದರೂ ಮನುಷ್ಯ ಮನುಷ್ಯರ ನಡುವೆ ದ್ವೇಷ ಸೃಷ್ಟಿಸುವುದು ಎಷ್ಟು ಸರಿ ಎಂಬುದನ್ನು ಬಿಜೆಪಿ ಮುಖಂಡರು ಅರ್ಥೈಸಿಕೊಳ್ಳಬೇಕು. ದೇಶ ಅಭಿವೃದ್ಧಿಯಾಗಬೇಕಾದರೆ ಶಾಂತಿ, ನೆಮ್ಮದಿ ಬೇಕಾಗಿದೆ. ಬಿಜೆಪಿಯಿಂದ ರಕ್ಷಣೆಯಿಲ್ಲ, ಅಭಿವೃದ್ಧಿ ಇಲ್ಲ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ಮೋದಿಯವರು ಗೋರಕ್ಷಣೆಯ ಹೆಸರಿನಲ್ಲಿ ನಕಲಿ ಗೋರಕ್ಷಣೆಯನ್ನು ಖಂಡಿಸಿದ್ದರೂ, ಕೃತ್ಯಗಳು ಮುಂದುವರೆಯುತ್ತಿವೆ. ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಪಶ್ಚಿಮ ವಲಯ ಐಜಿಪಿಗೆ ಮನವಿಯನ್ನು ನೀಡಲಾಗುವುದು ಎಂದು ಕೋಡಿಜಾಲ್ ಇಬ್ರಾಹೀಂ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಬುಡಾ ಅಧ್ಯಕ್ಷ ಪೀಯುಸ್ ಎಲ್. ರೋಡ್ರಿಗಸ್, ಕಾಂಗ್ರೆಸ್ ಮುಖಂಡರಾಧ ಪದ್ಮನಾಭ ನರಿಂಗಾನ, ಬಲರಾಜ್ ರೈ, ಲುಕ್ಮಾನ್, ರಮಾನಂದ್ ಪೂಜಾರಿ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News