ಬಾಲ್ಯ ವಿವಾಹ: ಪಾರಾದ ಬಾಲಕಿ!
ತೊಡುಪುಝ, ಆಗಸ್ಟ್ 19: ಮಲತಂದೆಯ ಸಂಬಂಧಿಕನೊಂದಿಗೆ ತನ್ನ ಮದುವೆ ಮಾಡಲಾಗಿದೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ಮಹಿಳಾ ಸೆಲ್ ಎಸ್ಸೈ ಹಾಗೂ ಚೈಲ್ಡ್ ವೆಲ್ಫೇರ್ ಸಮಿತಿ(ಸಿ ಡಬ್ಲ್ಯೂ ಸಿ) ಸದಸ್ಯರಿಗೆ ದೂರು ನೀಡಿರುವ ಘಟನೆ ತೊಡುಪುಝದಲ್ಲಿ ನಡೆದಿದ್ದು, ಬಾಲಕಿಗೆ ಇನ್ನೂ ಹದಿನೈದು ವರ್ಷ ಪೂರ್ತಿಯಾಗಿಲ್ಲ ಎಂದು ವರದಿಯೊಂದು ತಿಳಿಸಿದೆ. ಬುಧವಾರ ಸಂಜೆ ನಾಲ್ಕೂವರೆಗೆ ಬಾಲಕಿ ಮಹಿಳಾ ಸೆಲ್‌ಗೆ ಫೋನ್ ಮಾಡಿ ಮನೆಯವರು ಬಲವಂತಪಡಿಸಿ ತನಗೆ ಮದುವೆ ಮಾಡಿಸಿದ್ದಾರೆ,ತನ್ನನ್ನು ರಕ್ಷಿಸಬೇಕೆಂದು ವಿನಂತಿಸಿಕೊಂಡಿದ್ದಳು ಎನ್ನಲಾಗಿದೆ. ಆನಂತರ ಮಹಿಳಾ ಸೆಲ್ ಎಸ್ಸೈ ಸುಶೀಲಾರ ನೇತೃತ್ವದಲ್ಲಿ ಬಾಲಕಿಯನ್ನು ರಕ್ಷಿಸಿ ಶೆಲ್ಟರ್ ಹೋಮ್‌ಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಲಕಿ ತಿಳಿಸಿದಂತೆ,ತಿರುವನಂತಪುರಂದವಳಾದ ಬಾಲಕಿ ತೊಡುಪುಝಕ್ಕೆ ಬಂದು ಎರಡು ತಿಂಗಳು ಮಾತ್ರ ಆಗಿತ್ತು, ಬಾಲಕಿಯ ತಂದೆ ದೂರವಾದ ಬಳಿಕ ತಾಯಿ ಮರುವಿವಾಹವಾಗಿದ್ದರು, ಮಲಪುರಂನಲ್ಲಿ ಅವರು ಕೆಲಸಮಾಡುತ್ತಿದ್ದಾರೆ. ಬಾಲಕಿಯನ್ನು ಅವಳ ಒಂಬತ್ತನೆ ತರಗತಿ ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ತಿರುವನಂತಪುರಂನಿಂದ ತೊಡುಪುಝಕ್ಕೆ ಕರೆದು ಕೊಂಡು ಬರಲಾಗಿತ್ತು. ನಂತರ ಮಲತಂದೆಯ ಸಂಬಂಧಿಕನಾದ ವೆಂಙಲ್ಲೂರು ಎಂಬಲ್ಲಿನ ವ್ಯಕ್ತಿಯೊಂದಿಗೆ ಅವಳ ಮದುವೆ ನಿಶ್ಚಯಿಸಲಾಗಿತ್ತು. ಬಾಲಕಿ ಮದುವೆ ಮಾಡಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಅಮ್ಮ ಬೆದರಿಕೆ ಹಾಕಿ ವಿವಾಹಕ್ಕೆ ಒಪ್ಪಿಸಿದ್ದರು. ಖಾಸಗಿಯಾಗಿ ಮದುವೆಯೂ ಆಗಿತ್ತು ಎಂದು ಬಾಲಕಿ ಪೊಲೀಸರ ಮುಂದೆ ವಿವರಿಸಿದ್ದಾಳೆ ಎಂದು ವರದಿ ತಿಳಿಸಿದೆ.
ಬಾಲಕಿಗೆ ಮದುವೆಯ ಸಂದರ್ಭದಲ್ಲಿ ಪಾರಾಗಲು ಸಾಧ್ಯವಾಗಿರಲಿಲ್ಲ. ತಾಯಿ ವಾಸವಿದ್ದ ಬಾಡಿಗೆ ಮನೆಗೆ ಬುಧವಾರ ತಾಯಿ, ಬಾಲಕಿ ಮತ್ತು ಬಾಲಕಿಯ ಪತಿಯೂ ಬಂದಿದ್ದರು. ನಂತರ ಬಾಲಕಿಯ ಪತಿಯಾದವನು ಮದ್ಯಪಾನ ಮಾಡಿ ಬಂದು ಗಲಾಟೆಮಾಡಿದ್ದ. ಈ ವೇಳೆ ಮನೆಯವರ ಕಣ್ತಪ್ಪಿಸಿ ಬಾಲಕಿ ಟ್ಯೂಶನ್ ಸೆಂಟರ್‌ನಲ್ಲಿ ತನ್ನ ಜೊತೆ ಕಲಿತಿದ್ದ ಗೆಳೆಯನ ಮನೆಗೆ ಹೋಗಿ ವಿಷಯವನ್ನೆಲ್ಲ ತಿಳಿಸಿದ್ದಾಳೆ. ನಂತರ ಅವರು ವಾರ್ಡ್‌ಕೌನ್ಸಿಲರ್‌ಗೆ ಸುದ್ದಿ ಮುಟ್ಟಿಸಿದ್ದರು. ಆನಂತರ ಬಾಲಕಿಯೂ ಮಹಿಳಾ ಸೆಲ್‌ಗೆ ಫೋನ್ ಮಾಡಿದ್ದಳು. ಬಾಲಕಿಯನ್ನು ಮಹಿಳಾ ಪೊಲೀಸರು ಮತ್ತು ಸಿಡಬ್ಲ್ಯೂಸಿ ಸದಸ್ಯರು ಬಂದು ರಕ್ಷಿಸಿದ್ದು, ಅವಳಿಂದ ಹೇಳಿಕೆ ಪಡೆಯಲಾಗಿದೆ. ನಂತರ ಅವಳನ್ನು ಶೆಲ್ಟರ್ ಹೋಮ್‌ಗೆ ಸೇರಿಸಲಾಯಿತು ತಿಳಿದು ಬಂದಿದೆ. ಶಾರೀರಿಕ ಹಾಗೂ ಲೈಂಗಿಕವಾಗಿ ಯಾವುದೇ ಕಿರುಕುಳ ತನಗೆ ನೀಡಲಾಗಿಲ್ಲ ಎಂದು ಬಾಲಕಿ ಹೇಳಿದ್ದು, ಈವರೆಗೂ ಈ ಕುರಿತು ಪ್ರಕರಣ ದಾಖಲಿಸಲಾಗಿಲ್ಲ ಎಂದು ವರದಿ ತಿಳಿಸಿದೆ.