ಫಿಫಾ ಅಧಿವೇಶನದ ಆತಿಥ್ಯದಿಂದ ಹಿಂದೆ ಸರಿದ ಮಲೇಶ್ಯಾ
ಕೌಲಲಂಪುರ ಆ.19: 2017ರಲ್ಲಿ ತನ್ನ ದೇಶದಲ್ಲಿ ನಡೆಯಬೇಕಿದ್ದ ಫಿಫಾ ಅಧಿವೇಶನ ಆತಿಥ್ಯದಿಂದ ಮಲೇಶ್ಯಾ ಹಿಂದೆ ಸರಿದಿದೆ.ಅಧಿವೇಶನದಲ್ಲಿ ಭಾಗವಹಿಸುವ ಇಸ್ರೇಲಿ ಪ್ರತಿನಿಧಿಗಳಿಗೆ ವೀಸಾ ನೀಡುವುದು ಹಾಗೂ ಅಧಿವೇಶನದ ಸಂದರ್ಭ ಇಸ್ರೇಲಿ ಧ್ವಜ ಪ್ರದರ್ಶಿಸುವುದು ಸ್ಥಳೀಯ ಭಾವನೆಗೆ ಧಕ್ಕೆ ಉಂಟುಮಾಡಲಿದೆ ಎಂಬ ಕಾರಣಕ್ಕೆ ಮಲೇಶ್ಯಾ ಈ ನಿರ್ಧಾರ ತೆಗೆದುಕೊಂಡಿದೆ.
ಭದ್ರಾತ ಸಂಬಂಧಿ ವಿಷಯ ಕಾರಣ ಕಾರ್ಯಕ್ರಮವನ್ನು ಹಿಂದೆಗೆಯಬೇಕು ಎಂದು ಸರಕಾರಕ್ಕೆ ನಾವು ಸಲಹೆ ನೀಡಿದ್ದೇವೆ ಎಂದು ಫುಟ್‌ಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಅಫಂದಿ ಹಂಝಾ ಅಧಿಕೃತವಾಗಿ ಎಎಫ್‌ಪಿಗೆ ತಿಳಿಸಿದ್ದಾರೆ.
2017ರ ಮೇ 11 ಮತ್ತು 12ರಂದು ನಡೆಯಲಿರುವ ಎರಡು ದಿನಗಳ ಫಿಫಾ ಸಮ್ಮೇಳನ ಕೌಲಲಂಪುರದಲ್ಲಿ ನಡೆಸಲಾಗುವುದು ಎಂದು ನಿಗದಿಯಾಗಿತ್ತು.ಸಮ್ಮೇಳನವನ್ನು ಆಯೋಜಿಸಿರುವುದು ಸೇರಿದಂತೆ ಇಸ್ರೇಲ್ ಧ್ವಜ ಟೇಬಲಿನ ಮೇಲೆ ಇರಿಸುವ ಬಗ್ಗೆ ನಾವು ದೇಶದ ಜನರ ಮನಸ್ಥಿತಿಯನ್ನು ಅರಿತುಕೊಂಡು ಲಾಭ ಮತ್ತು ಅಪಾಯಗಳನ್ನು ತುಲನೆ ಮಾಡಿ ಫಿಫಾ ಸಮ್ಮೇಳನವನ್ನು ತಪ್ಪಿಸಿಕೊಳ್ಳುವುದು ಒಳಿತೆಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮಲೇಶ್ಯಾ ಗೃಹ ಸಚಿವ ಝಾಹಿದ್ ಹೇಳಿದ್ದಾರೆ.