ಧರ್ಮಸ್ಥಳ: ‘ಸತ್ಯಕ್ಕೆ ಸಂದ ಜಯ’ ಕಾರ್ಯಕ್ರಮ

Update: 2016-08-19 12:37 GMT

ಬೆಳ್ತಂಗಡಿ, ಆ.19: ಸುಳ್ಳು ಆರೋಪ ಮಾಡಿ ಜನರನ್ನು ಒಮ್ಮೆ ದಾರಿ ತಪ್ಪಿಸಲು ಸಾಧ್ಯವಿದೆ. ಆದರೆ ಎಂದೂ ಅಂತಿಮ ಗೆಲುವು ಸತ್ಯದ್ದಾಗಿರುತ್ತದೆ. ಇದೀಗ ಅದು ಸಾಬೀತಾಗಿದೆ. ಸೌಜನ್ಯ ಪ್ರಕರಣದಲ್ಲಿ ತನಿಖೆಯಿಂದ ಸತ್ಯ ಹೊರಬಂದಿದೆ. ಆರೋಪಗಳನ್ನು ಮಾಡಿದವರಿಗೆ ದೇವರು ಒಳ್ಳೆಯ ಮನಸ್ಸನ್ನು ಕೊಟ್ಟು ಸತ್ಕಾರ್ಯ ಮಾಡುವ ಪ್ರೇರಣೆ ನೀಡಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಯಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಧರ್ಮಸ್ಥಳದಲ್ಲಿ ಶುಕ್ರವಾರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸತ್ಯಕ್ಕೆ ಸಂದ ಜಯ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಮಾಜಿ ಶಾಸಕರುಗಳಾದ ಬೈಂದೂರಿನ ಅಪ್ಪಣ್ಣ ಹೆಗ್ಡೆ, ಕಾರ್ಕಳದ ಗೋಪಾಲ ಭಂಡಾರಿ ಮತ್ತು ಉಡುಪಿಯ ರಘುಪತಿ ಭಟ್, ಉಜಿರೆ ಅಶೋಕ ಭಟ್ ಮಾತನಾಡಿ ಸಿಬಿಐ ವರದಿಯಿಂದ ಎಲ್ಲರಿಗೂ ಸಮಾಧಾನವಾಗಿದೆ. ಇನ್ನಾದರೂ ಅಪಪ್ರಚಾರಕ್ಕೆ ಇತಿಶ್ರೀಯಾಗಬೇಕು ಎಂದು ಕೋರಿದರು.

ಪುತ್ತೂರಿನ ಜಗದೀಶ, ವಕೀಲ ಸುಬ್ರಹ್ಮಣ್ಯ ಅಗರ್ತ, ಮಹೇಶ್ ಸುಳ್ಯ, ವಿಮಲಾ ರಂಗಯ್ಯ, ನೆರಿಯಾದ ಯು.ಸಿ. ಪೌಲೋಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್ ಹೊನ್ನಳ್ಳಿ, ಎಂ.ಬಿ. ಪುರಾಣಿಕ್, ಡಿ.ಎ. ರಹ್ಮಾನ್, ರಾಜಶ್ರೀ ಎಸ್. ಹೆಗ್ಡೆ ಮಾತನಾಡಿದರು. ಬಂಟ್ವಾಳದ ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿಜಯರಾಘವ ಪಡ್ವೆಟ್ನಾಯ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.

ಚಂದನ್ ಕಾಮತ್ ಸ್ವಾಗತಿಸಿದರು. ವಕೀಲ ರತ್ನವರ್ಮ ಬುಣ್ಣು ವಂದಿಸಿದರು. ಕೇಶವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಮತ್ತು ಸತ್ಯಮೇವ ಜಯತೆ ಸಮಿತಿಯ ಸದಸ್ಯರು ಮತ್ತು ಊರಿನ ನಾಗರಿಕರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ವಾಹನ ಜಾಥಾದಲ್ಲಿ ಉಜಿರೆಗೆ ಹೋಗಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಬಂದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News