ಕುರಿಯ: ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

Update: 2016-08-19 12:56 GMT

ಪುತ್ತೂರು,ಆ.19: ಶಿಕ್ಷಕರ ವರ್ಗಾವಣೆ ವಿರೋಧಿಸಿ ತಾಲೂಕಿನ ಕುರಿಯ ಗ್ರಾಮದ ಇಡ್ಯೊಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶುಕ್ರವಾರ ತರಗತಿ ಬಹಿಷ್ಕರಿಸಿದರು. ಮಕ್ಕಳ ಪೋಷಕರು ಶಾಲೆಯ ಗೇಟಿನ ಮುಂದೆ ಇಡೀ ದಿನ ಪ್ರತಿಭಟನೆ ನಡೆಸಿದರು. ಶಾಲೆಗೆ ಶಿಕ್ಷಕರ ವ್ಯವಸ್ಥೆ ಆಗುವವರೆಗೆ ಪ್ರತಿಭಟನೆ ಮತ್ತು ತರಗತಿ ಬಹಿಷ್ಕಾರ ಇದೇ ರೀತಿ ಮುಂದುವರಿಯುತ್ತದೆ ಎಂದು ಪೋಷಕರು ಎಚ್ಚರಿಸಿದ್ದಾರೆ.

ಕಳೆದ ಸಾಲಿನಲ್ಲಿ ಈ ಶಾಲೆಯಲ್ಲಿ 37 ಮಕ್ಕಳಿದ್ದರೆ, ಈ ಸಾಲಿನಲ್ಲಿ 41ಕ್ಕೆ ಏರಿದೆ. ಕಳೆದ ಸಾಲಿನಲ್ಲಿ ಇಲ್ಲಿ ಪ್ರದೀಪ್ ಮತ್ತು ದಿನೇಶ್ ಎಂಬ ಇಬ್ಬರು ಶಿಕ್ಷಕರಿದ್ದರೂ, ಅಕ್ಟೋಬರ್ ಹೊತ್ತಿಗೆ ಇಲ್ಲಿಗೆ ನೀನಾ ಕುವೆಲ್ಲೋ ಎಂಬ ಶಿಕ್ಷಕಿ ವರ್ಗಾವಣೆಯಾಗಿ ಬಂದರು. ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿಗೆ ಇಬ್ಬರು ಶಿಕ್ಷಕರು ಸಾಕಾಗುತ್ತಿತ್ತು. ಆದರೂ ಇಲಾಖೆ ಒಬ್ಬರು ಶಿಕ್ಷಕಿಯನ್ನು ಹೆಚ್ಚುವರಿಯಾಗಿ ಕೊಟ್ಟಿತು. ಹಾಗೆ ಕೊಡದೇ ಇರುತ್ತಿದ್ದರೆ ಈ ಬಾರಿ ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ಈ ಶಾಲೆ ಗುರುತಿಸಿಕೊಳ್ಳುತ್ತಿರಲಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಸಿರ್ ಇಡಬೆಟ್ಟು ಹೇಳಿದರು.

ನೀನಾ ಕುವೆಲ್ಲೋ ಅವರು ಕೇವಲ ಹತ್ತು ದಿನ ಮಾತ್ರ ಇಲ್ಲಿ ಸೇವೆ ಸಲ್ಲಿಸಿದ್ದು, ನಂತರ ಬಡಕ್ಕೋಡಿ (ಕ್ತಕೋಡಿ) ಶಾಲೆಗೆ ನಿಯೋಜನೆಗೊಂಡರು. ಈ ಬಾರಿಯೂ ಅವರ ನಿಯೋಜನೆ ಮುಂದುವರಿಯಿತು. ಆದರೆ ಅವರ ಮಾತೃಶಾಲೆ ಇಡ್ಯೊಟ್ಟು ಆದ ಕಾರಣ ಇಲ್ಲಿ ಮೂವರು ಶಿಕ್ಷಕರು ಸರಕಾರದ ಲೆಕ್ಕದಲ್ಲಿ ಕಾಣಿಸಿದರು. ಹೀಗಾಗಿ ಒಬ್ಬರನ್ನು ಹೆಚ್ಚುವರಿ ಎಂದು ಗುರುತಿಸಿ ಜೇಷ್ಠತೆ ಆಧಾರದಲ್ಲಿ ದಿನೇಶ್ ಎಂಬ ಶಿಕ್ಷರನ್ನು ವರ್ಗಾವಣೆ ಡಲಾಗಿದೆ. ಅವರು ಬಂಟ್ವಾಳ ತಾಲೂಕಿನ ಅರ್ಕುಳಕ್ಕೆ ತೆರಳಿದ್ದಾರೆ. ಒಂದು ಕಡೆ ದಿನೇಶ್ ತೆರಳಿದ್ದರೂ, ಮತ್ತೊಂದು ಕಡೆ ನೀನಾ ಕುವೆಲ್ಲೋ ಇನ್ನೂ ಈ ಶಾಲೆಗೆ ಬಂದಿಲ್ಲ. ಹೀಗಾಗಿ ಕಳೆದ ಒಂದು ವಾರದಿಂದ ಇಲ್ಲಿ ಕೇವಲ ಪ್ರದೀಪ್ ಎಂಬ ಶಿಕ್ಷಕರು ಒಬ್ಬರೇ ಇದ್ದಾರೆ. ಇದರಿಂದ ಮಕ್ಕಳಿಗೆ ಪಾಠ ಮಾಡಲು ಆಗುತ್ತಿಲ್ಲ. ಉತ್ತಮ ಶಾಲೆಯೊಂದು ಈ ಮೂಲಕ ಬಸವಳಿಯುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ದಿನೇಶ್ ಅವರೇ ಬೇಕಿತ್ತು. ಆದರೆ ಅವರು ವರ್ಗವಾಗಿ ಹೋಗಿ ಆಗಿದೆ. ನಮಗೀಗ ನೀನಾ ಕುವೆಲ್ಲೋ ಬರುತ್ತಾರೋ ಗೊತ್ತಿಲ್ಲ. ಆದರೆ ನಮಗೆ ಒಬ್ಬರು ಶಿಕ್ಷಕರನ್ನು ತಕ್ಷಣ ಇಲ್ಲಿಗೆ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಇದು ಒಂದು ದಿನದ ಪ್ರತಿಭಟನೆ ಅಲ್ಲ ಎಂದು ನಾಸಿರ್ ಇಡಬೆಟ್ಟು ಮತ್ತು ಇತರ ಪೋಷಕರು ಎಚ್ಚರಿಸಿದರು.

ಶುಕ್ರವಾರ ಬೆಳಗ್ಗೆ 9 ಗಂಟೆಯಿಂದಲೇ ಪೋಷಕರು ಶಾಲೆಯ ಗೇಟಿನ ಎದುರು ಪ್ರತಿಟನೆ ಆರಂಭಿಸಿದ್ದು, ಮಧ್ಯಾಹ್ನವಾದರೂ ಇಲಾಖೆಯ ಯಾವ ಅಧಿಕಾರಿಯೂ ಭೇಟಿ ನೀಡದೇ ಇದ್ದುದು ಪೋಷಕರ ಆಕ್ರೋಶಕ್ಕೆ ಕಾರಣವಾಯಿತು.

ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಾಸಿರ್ ಇಡಬೆಟ್ಟು, ಹಿರಿಯ ವಿದ್ಯಾರ್ಥಿಗಳ ಮುಖಂಡೆ ಮಾಲತಿ, ಪೋಷಕರಾದ ಹೇಮಾವತಿ, ಪುಷ್ಪಾ, ಕುಸುಮಾ, ಪವಿತ್ರ, ಕುಸುಮಾ ಕರೆಂಜ, ಶೀನ, ಮೀನಾಕ್ಷಿ, ಆಮೀನಾ, ನೆಬಿಸಾ, ದಿಲ್‌ಶಾದ್, ಶಬನಾ, ಸುಂದರಿ, ಕಮಲ, ಸುರೇಶ್, ಮುಸ್ತಫಾ, ಯಾಹಿಯಾ, ರಿಯಾಝ್, ಚೆನ್ನಕೇಶವ, ಅಶೋಕ್, ಉಮೇಶ್, ಕೃಷ್ಣ ಮಣಿಯಾಣಿ, ಈಶ್ವರ ಕಟ್ಟದಬೈಲ್, ಅಹ್ಮದ್, ಇಲಿಯಾಸ್, ಶೇಖರ, ಹರಿಣಾಕ್ಷಿ, ಧನು, ರಂಜಿತ್, ಬಲ್ಕೀಸ್, ಶ್ರೀಧರ ಮಣಿಯಾಣಿ, ಸುಂದರಿ, ಲೀಲಾವತಿ, ಪ್ರಶಾಂತ್ ಮುಂತಾದವರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News