ಕಾಟಿಪಳ್ಳ: ನೂರುಲ್ ಹುದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ
ಮಂಗಳೂರು, ಆ.19: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ನೂರುಲ್ ಹುದಾ ಶಿಕ್ಷಣ ಸಂಸ್ಥೆ ಕಾಟಿಪಳ್ಳ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಕಾಟಿಪಳ್ಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ನೂರುಲ್ ಹುದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ಜರಗಿತು.
ಶಾಸಕ ಬಿ.ಎ. ಮೊಯ್ದೀನ್ ಬಾವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಕಲಿಯುವಿಕೆಯಲ್ಲಿ ಹುರುಪು, ಉತ್ಸಾಹ ಇಮ್ಮಡಿಗೊಳ್ಳುವುದು ಎಂದು ಹೇಳಿದರು.
28 ಶಾಲೆಗಳ 625 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯದರ್ಶಿ ಜಿ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಕಾರ್ಪೊರೇಟರ್, ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಪಿ.ಬಶೀರ್ ಅಹ್ಮದ್, ತಾಲೂಕು ಶಿಕ್ಷಣ ಸಂಯೋಜಕ ಕೆ.ರಘುನಾಥ್, ನಿವೃತ್ತ ಮುಖ್ಯ ಶಿಕ್ಷಕ ಪಿ.ಅಬ್ದುಸ್ಸಮದ್ ಮಾಸ್ಟರ್, ಕಾಟಿಪಳ್ಳದ ಎರಡು ಕ್ಲಸ್ಟರ್‌ಗಳ ಸಿ.ಆರ್.ಪಿ.ಗಳಾದ ಐರಿನ್ ಪಿಂಟೊ ಹಾಗೂ ಶಾಂತಾ, ಪಣಂಬೂರು ಮುಸ್ಲಿಂ ಜಮಾಅತಿನ ಉಪಾಧ್ಯಕ್ಷ ಜಿ.ಹುಸೈನ್ ಬಾವ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಝರೀನ ಮಯ್ಯದ್ದಿ, ಹಿರಿಯ ಟ್ರಸ್ಟಿ ಲೆಕ್ಕಪರಿಶೋಧಕ ಪಿ.ಅಬ್ದುಲ್ ಹಮೀದ್, ಮುಖ್ಯ ಶಿಕ್ಷಕಿಯರಾದ ಸುನೀತಾ ಪೈ, ಶಕುಂತಳಾ ಎಚ್.ಎಂ.ಸಿ., ಕಾಲೇಜು ಪ್ರಾಂಶುಪಾಲೆ ನಯನಾ ಶೇಣವ, ಕೋಶಾಧಿಕಾರಿ ಶರೀಫ್ ಉಪಸ್ಥಿತರಿದ್ದರು.
ಸಂಚಾಲಕ ಪಿ.ಎ.ಇಲ್ಯಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹಶಿಕ್ಷಕಿಯರಾದ ರಮಾದೇವಿ ಮತ್ತು ಆರಿಫಾ ಮುಸ್ತಫಾ ನಿರೂಪಿಸಿದರು. ಪುಷ್ಪಾ ವಂದಿಸಿದರು.