ಪುತ್ತೂರು ಸಂತೆ ವಿವಾದ: ಸೂಕ್ತ ತೀರ್ಮಾನ ಕೈಗೊಳ್ಳುವಲ್ಲಿ ನಗರಸಭೆ ವಿಫಲ

Update: 2016-08-19 13:46 GMT

ಪುತ್ತೂರು, ಆ.19: ವಾರದ ಸಂತೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ನಗರಸಭೆಯ ವಿಶೇಷ ಸಭೆ ವಿಫಲವಾಗಿದೆ. ಕಾನೂನು ತಜ್ಞರ ಸಲಹೆ ಪಡೆಯಬೇಕೆಂಬ ವಿಚಾರಕ್ಕೂ ಸೂಕ್ತ ಪುರಸ್ಕಾರ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯರು ಆಕ್ಷೇಪ ಸಲ್ಲಿಸಿದ್ದು, ದಾಖಲೀಕರಣಕ್ಕೆ ಒತ್ತಾಯಿಸಿದರು
ವಿವಾದಿತ ಸಂತೆಯ ಸ್ಥಳಾಂತರ ವಿಚಾರವಾಗಿ ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆಯ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು.

ಪುತ್ತೂರಿನ ವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿದರೆ ನಗರಸಭೆಯ ಆದಾಯಕ್ಕೆ ಕೊರತೆಯಾಗುತ್ತದೆ. ಆದ್ದರಿಂದ ಎಪಿಎಂಸಿಗೆ ಸ್ಥಳಾಂತರಿಸದೇ ನಗರಸಭೆಯ ಅಧೀನದಲ್ಲೇ ಉಳಿಸಿಕೊಳ್ಳಬೇಕು. ಸ್ವಲ್ಪಸಮಯ ಕಿಲ್ಲೆ ಮೈದಾನದಲ್ಲಿ ನಡೆಸಿ, ಬಳಿಕ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಿಪಕ್ಷ ಸದಸ್ಯರು ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದೇ, ಸಹಾಯಕ ಕಮಿಷನರ್ ಆದೇಶ ಸರಿಯಾಗಿಯೇ ಇದೆ ಎಂದು ಬೆಂಬಲಿಸಿದರು. ಚರ್ಚೆಯ ನಡುವೆ ಪ್ರವೇಶಿಸಿದ ಸದಸ್ಯ ಶಕ್ತಿ ಸಿನ್ಹಾ, ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದು ಒಳಿತು ಎಂದು ಅಭಿಪ್ರಾಯಿಸಿದರು.

ಇದನ್ನು ವಿಪಕ್ಷ ಸದಸ್ಯರು ಒಪ್ಪಿಕೊಂಡರೂ, ನಗರಸಭೆಯ ಮೂವರು ವಕೀಲರ ಅಭಿಪ್ರಾಯವೂ ಅಗತ್ಯ ಎಂದರು. ಇದನ್ನು ಒಪ್ಪಿಕೊಳ್ಳದ ಆಡಳಿತ ಪಕ್ಷದವರು ಅದು ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ವಾದಿಸಿದರು. ಇದನ್ನು ಒಪ್ಪಿಕೊಳ್ಳದ ವಿಪಕ್ಷ ಸದಸ್ಯರು, ಆಕ್ಷೇಪಣಾ ಪತ್ರವನ್ನು ಪಡೆದುಕೊಂಡು, ಹಿಂಬರಹ ಪಡೆದುಕೊಂಡರು. ಒಟ್ಟಿನಲ್ಲಿ ನಗರಸಭೆಯ ವಿಶೇಷ ಸಭೆ ಯಾವುದೇ ತೀರ್ಮಾನ ಕೈಗೊಳ್ಳಲು ವಿಫಲವಾಯಿತು. ವಾದ- ಪ್ರತಿವಾದಕ್ಕಷ್ಟೇ ಸೀಮಿತವಾಯಿತು.

ನಗರಸಭೆ ಸದಸ್ಯ ಜೀವಂದರ್ ಜೈನ್ ಮಾತನಾಡಿ, ನಗರಸಭೆ ಜವಾಬ್ದಾರಿ ಅರಿತುಕೊಂಡು ಅಧ್ಯಕ್ಷೆಗೆ ಮನವಿ ನೀಡಿದ್ದೇವೆ. ಸಹಾಯಕ ಆಯುಕ್ತರು ಪೂರ್ಣ ಪ್ರಮಾಣದ ಆದೇಶ ಇನ್ನೂ ನೀಡಿಲ್ಲ. ಕಳೆದ ಹಲವು ವರ್ಷಗಳಿಂದ ಕಿಲ್ಲೆ ಮೈದಾನ, ರಸ್ತೆಯಲ್ಲೇ ಸಂತೆ ನಡೆಯಲು ಅವಕಾಶ ಮಾಡಿಕೊಟ್ಟಿರುವುದು ನಗರಸಬೆಯದ್ದೇ ತಪ್ಪು. 2013ರಲ್ಲಿ ಸಂತೆಗಾಗಿ ಸ್ಥಳ ಗುರುತಿಸಿ, ಆಗಿನ ಸಹಾಯಕ ಆಯುಕ್ತ ಪ್ರಸನ್ನ ಕುಮಾರ್ ಆದೇಶಿಸಿದ್ದರು. ಈ ಪ್ರಸ್ತಾವನೆಯನ್ನು ಅಂತಿಮ ಮಾಡಿ, ಅದೇ ಜಾಗದಲ್ಲಿ ಸಂತೆ ನಡೆಸಬೇಕು. ಸಂತೆಯನ್ನು ನಗರಸಭೆಯ ಅಧೀನದಲ್ಲೇ ಉಳಿಸಿಕೊಳ್ಳಬೇಕು. ಈಗಾಗಲೇ ಎಡಿಬಿಗೆ 28 ಕೋಟಿ ರೂ. ಸಾಲ ಬಾಕಿಯಿದೆ. ಸಾರ್ವಜನಿಕರಿಗೆ ಉಪಯೋಗವಾಗುವಂತೆ, ಪರ್ಯಾಯ ವ್ಯವಸ್ಥೆ ಆಗುವವರೆಗೆ ಕಿಲ್ಲೆ ಮೈದಾನದಲ್ಲೇ ಸಂತೆ ನಡೆಯಲಿ. ರಸ್ತೆಗೆ ಬಿಡದಂತೆ ನಗರಸಭೆ ಮುತುವರ್ಜಿ ವಹಿಸಬೇಕು. ಏಕಾಏಕಿ ಆದೇಶ ನೀಡಿರುವುದು ಸರಿಯಲ್ಲ. ನಗರಸಭೆ ಶಾಸಕಾಂಗವಾಗಿಯೂ ಪ್ರಯೋಜನ ವಿಲ್ಲದಂತಾಗಿದೆ ಎಂದರು.

ಸದಸ್ಯ ರಾಜೇಶ್ ಬನ್ನೂರು ಮಾತನಾಡಿ, ತಲೆನೋವಾಗಿದೆ ಎಂದು ತಲೆ ಕಡಿಯಲು ನಾವು ಸಿದ್ಧರಿಲ್ಲ. ಕಿಲ್ಲೆ ಮೈದಾನಕ್ಕೆ ಆವರಣ ಗೋಡೆ ಮಾಡಿ, ಸೂಕ್ತ ವ್ಯವಸ್ಥೆ ಕಲ್ಪಿಸಿ. ಸಂತೆಯನ್ನು ನಗರಸಭೆಯಲ್ಲೇ ಉಳಿಸಿಕೊಳ್ಳಬೇಕು ಎಂದರು.

ಸದಸ್ಯ ಮುಹಮ್ಮದಾಲಿ ಮಾತನಾಡಿ, ಪುತ್ತೂರಿನ ಸಂತೆಯಲ್ಲಿ ಊರಿನ ತರಕಾರಿ ಸಿಗುವುದಿಲ್ಲ. ಹೊರಗಿನಿಂದ ಬಂದವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವುದು ನಗರಸಭೆಯ ಜವಾಬ್ದಾರಿ. ಈ ದೃಷ್ಟಿಯಿಂದ ಎಸಿ ಆದೇಶ ಹೊರಡಿಸಿದ್ದಾರೆ. ಮಿನಿವಿಧಾನಸೌಧ ಪುತ್ತೂರಿನಿಂದ ಹೊರಗೆ ಹೋಗಲು ಬಿಡಲಿಲ್ಲ. ಈಗ ಸಂತೆಯನ್ನೂ ಹೋಗಲು ಬಿಡದಿದ್ದರೆ ಸಮಸ್ಯೆಗೆ ಪರಿಹಾರ ಹೇಗೆ? ರಸ್ತೆ ಅಗಲಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ವ್ಯಾಪಾರಿಗಳು ನಡೆಸಿದ ಜಾಥಾದಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಲಾಗಿದೆ ಎಂದು ಮುಹಮ್ಮದಾಲಿ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ವಿರೋಧಿಸಿದ ರಾಜೇಶ್ ಬನ್ನೂರು, ಅಧಿಕಾರಿ- ಜನಪ್ರತಿನಿಧಿ ವಿರುದ್ಧ ಘೋಷಣೆ ಕೂಗಿಲ್ಲ. ಹೋರಾಟ ಸಮಿತಿಯ ಸಭೆಯಲ್ಲಿ ಮೊದಲೇ ಸ್ಪಷ್ಟವಾಗಿ ಹೇಳಲಾಗಿದೆ. ಈ ಬಗ್ಗೆ ಸೂಕ್ತ ದಾಖಲೆ ನೀಡಿದರೆ, ಮೊದಲೇ ಹೇಳಿದಂತೆ ನಗರಸಭೆಯ 12 ಸದಸ್ಯರು ಸಂತೆ ಉಳಿಸಿ ಹೋರಾಟದಿಂದ ಹಿಂದೆ ಸರಿಯುವುದಾಗಿ ಸವಾಲೆಸೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News