ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯೊಂದಿಗೆ ಮುನ್ನಡೆಯಿರಿ: ಡಾ.ಸಿ.ಕೆ.ಕಿಶೋರ್ ಕುಮಾರ್
ಕೊಣಾಜೆ, ಆ.19: ಇಂದು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಉತ್ತಮ ಅವಕಾಶಗಳು ಲಭಿಸುತ್ತಿದ್ದು, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿಕೊಂಡು ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೆ.ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಮಂಗಳೂರು ದಕ್ಷಿಣ ಹಾಗೂ ವಿಶ್ವಮಂಗಳ ಆಂಗ್ಲಮಾಧ್ಯಮ ಪ್ರೌಢಶಾಲೆ, ಕೊಣಾಜೆ ಇವರ ಸಂಯುಕ್ತ ಆಶ್ರಯದಲ್ಲಿ 2016-17ನೆ ಸಾಲಿನ ಪ್ರೌಢಶಾಲಾ ಮಟ್ಟದ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರಕ್ಕೆ ಇಂದು ಸರಕಾರ ಹಲವಾರು ಅವಕಾಶಗಳನ್ನು ನೀಡಿದಂತೆ ಕ್ರೀಡಾಕ್ಷೇತ್ರಕ್ಕೂ ಉತ್ತಮ ಅವಕಾಶಗಳನ್ನು ಒದಗಿಸಿದೆ. ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಸ್ನಾತಕೋತ್ತರ ಮಟ್ಟದಲ್ಲಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ವಾಲಿಬಾಲ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ವಿಶ್ವಮಂಗಳ ಆಂಗ್ಲಮಾಧ್ಯಮ ಶಾಲೆಯು ಪ್ರಥಮ ಸ್ಥಾನ, ಸೈಂಟ್ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ, ತೊಕ್ಕೊಟು ದ್ವಿತೀಯ ಸ್ಥಾನವನ್ನೂ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಭಾರತಿ ಆಂಗ್ಲಮಾಧ್ಯಮ ಪ್ರೌಢಶಾಲೆ ಉಳ್ಳಾಲ ಪ್ರಥಮ ಸ್ಥಾನ, ಸರಕಾರಿ ಪ್ರೌಢಶಾಲೆ, ಕಲ್ಕಟ್ಟ- ಮಂಜನಾಡಿ ದ್ವಿತೀಯ ಸ್ಥಾನವನ್ನು ಪಡೆದರು.
ಸಮಾಜ ಸೇವಕ ಸೋಮಶೇಖರ್ ಚೌಟ ಕಡೆಂಜ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ ತ್ಯಾಗಂ, ಪ್ರಾಥಮಿಕ ಶಾಲಾ ಉಳ್ಳಾಲ ವಲಯದ ನೋಡಲ್ ಅಧಿಕಾರಿ ರಾಧಕೃಷ್ಣ ರೈ, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷೆ ಶರೀನಾ, ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯ ಹರೀಶ್‌ಕುಮಾರ್, ನಿವೃತ್ತ ಅಧ್ಯಾಪಕ ಆನಂದ ಅಸೈಗೋಳಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ.ಶೆಟ್ಟಿ, ಪ್ರೌಢಶಾಲಾ ಮುಖ್ಯಸ್ಥೆ ಉಷಾ ಎಂ., ಹಳೆ ವಿದ್ಯಾರ್ಥಿ ಸಂಘದ ಪ್ರಭಾರ ಅಧ್ಯಕ್ಷ ಅಶ್ವಿಲ್ ರಾಜ್ ಮಾರ್ಕ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾವತಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೌಢಶಾಲಾ ಸಹ ಶಿಕ್ಷಕಿ ಕುಮಾರಿ ದಿವ್ಯಾ ವಂದಿಸಿದರು. ಸಹಶಿಕ್ಷಕಿ ವನಿತಾ ಕಾರ್ಯಕ್ರಮವನ್ನು ನಿರೂಪಿಸಿದರು.