ಹಿಜಾಬ್‌ಧಾರಿಣಿಯನ್ನು ಟ್ರಂಪ್ ರ್ಯಾಲಿಯಿಂದ ಹೊರದಬ್ಬಿದರು
ವಾಶಿಂಗ್ಟನ್, ಆ. 19: ಜನವರಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಸಭೆಯಿಂದ ಹೊರ ಹಾಕಲಾಗಿದ್ದ ಹಿಜಾಬ್‌ಧಾರಿಣಿ ಮುಸ್ಲಿಮ್ ಮಹಿಳೆಯನ್ನು ಎರಡನೆ ಬಾರಿಗೆ ಅವರ ಸಭೆಯಿಂದ ಹೊರದಬ್ಬಲಾಗಿದೆ.
ಈ ಬಾರಿ ‘ಸಲಾಂ (ಶಾಂತಿ)’ ಎಂಬುದಾಗಿ ಬರೆದಿದ್ದ ಪೆನ್ನುಗಳನ್ನು ವಿತರಿಸಿರುವುದಕ್ಕಾಗಿ ನಾರ್ತ್ ಕ್ಯಾರಲೈನದ ಶಾರ್ಲೋಟ್‌ನಲ್ಲಿ ನಡೆದ ಸಭೆಯಿಂದ ಅವರನ್ನು ಸಭೆ ಆರಂಭಗೊಳ್ಳುವ ಮೊದಲೇ ಹೊರ ತಳ್ಳಲಾಗಿದೆ. ಅವರು ‘ತೊಂದರೆ ನೀಡುತ್ತಿದ್ದಾರೆ’ ಎಂಬ ಕಾರಣವನ್ನು ಅದಕ್ಕೆ ನೀಡಲಾಗಿದೆ.
‘‘ಟ್ರಂಪ್‌ರನ್ನು ಬೆಂಬಲಿಸದ ಮುಸ್ಲಿಮರು ಅವರನ್ನು ಬೆಂಬಲಿಸುವವರೊಂದಿಗೆ ಹೊಂದಿಕೊಳ್ಳಬಲ್ಲರು ಎಂಬುದನ್ನು ಜನರಿಗೆ ತಿಳಿಸಲು ಬಯಸಿದ್ದೆ. ಆದರೆ ಟ್ರಂಪ್‌ರ ಭದ್ರತಾ ಸಿಬ್ಬಂದಿಯೊಬ್ಬ ನನ್ನನ್ನು ಅಲ್ಲಿಂದ ಹೊರತಳ್ಳಿದನು’’ ಎಂದು ರೋಸ್ ಹಮೀದ್ ಹೇಳಿದರು.
ಆ ಸಭೆಯಲ್ಲಿ ಹಮೀದ್ ‘ಸಲಾಂ’ ಎಂದು ಬರೆದ ಪೆನ್ನುಗಳನ್ನು ಜನರಿಗೆ ನೀಡುತ್ತಿದ್ದರು.
‘‘ಅದು ಸಹೃದಯತೆ ಸಂಕೇತವಾಗಿದೆ ಎಂದು ನಾನು ಭಾವಿಸಿದ್ದೆ. ಅದರಲ್ಲಿ ಬರೆದ ಆ ಕಿರು ಸಂದೇಶವನ್ನು ನಾನು ಪ್ರೀತಿಸಿದೆ’’ ಎಂದರು.
ಟ್ರಂಪ್ ಆಡಳಿತದಲ್ಲಿ ಬದುಕು ಜೀವನ ಹೇಗಿರಬಹುದು ಎಂಬ ಕಳವಳವನ್ನು ರೋಸ್ ಹಮೀದ್ ವ್ಯಕ್ತಪಡಿಸಿದರು.