ಭಾರತೀಯ ಸೇನೆಯಿಂದ ಮಯನ್ಮಾರ್ ನೊಳಗೆ ನುಗ್ಗಿ ದಾಳಿ ?

Update: 2016-08-20 03:01 GMT

ಹೊಸದಿಲ್ಲಿ, ಆ.20: ಭಾರತೀಯ ಸೇನೆ ಹಾಗೂ ಶಂಕಿತ ನ್ಯಾಷನಲ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಕಪ್ಲಂಗ್) ಭಯೋತ್ಪಾದಕರ ನಡುವೆ ನಾಗಾಲ್ಯಾಂಡ್‌ನ ಮಾನ್ ಜಿಲ್ಲೆಯ ಭಾರತ-  ಮಯನ್ಮಾರ್ ಗಡಿಯಲ್ಲಿ ಶುಕ್ರವಾರ ಭೀಕರ ಗುಂಡಿನ ಕಾಳಗ ನಡೆದಿದೆ. ಕನಿಷ್ಠ 30 ಮಂದಿ ಅರೆ ಮಿಲಿಟರಿ ಪಡೆ ಸಿಬ್ಬಂದಿಯ ಪಡೆ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ವೇಳೆ  ಮಯನ್ಮಾರ್ನ ಗಡಿಯೊಳಗೆ ತೆರಳಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಕನಿಷ್ಠ ಐದರಿಂದ ಆರು ಕಮಾಂಡೊಗಳನ್ನು ಹತ್ಯೆ ಮಾಡಿದ್ದಾಗಿ ಎನ್‌ಎಸ್‌ಸಿಎನ್-ಕೆ ಹೇಳಿಕೊಂಡಿದೆ. ಆದರೆ ಸೇನೆ ಈ ವರದಿಗಳನ್ನು ನಿರಾಕರಿಸಿದ್ದು, ಭಾರತೀಯ ಗಡಿಯೊಳಗೆಯೇ ಗುಂಡಿನ ಚಕಮಕಿ ನಡೆದಿದೆ ಎಂದು ಸಮರ್ಥಿಸಿಕೊಂಡಿದೆ.

ಮಾಜ್ ಜಿಲ್ಲೆಯ ಥ್ರೋಯಿಲು ಗ್ರಾಮದ ಬಳಿ ಗಡಿಯಲ್ಲಿ ಭಾರತ ಪ್ರದೇಶದೊಳಗೆ ಮುಂಜಾನೆ 5:30ರ ವೇಳೆಗೆ ಭೀಕರ ಸಮರ ನಡೆದಿದೆ ಎಂದು ಸೇನೆ ಹೇಳಿದೆ. ನುಸುಳುಕೋರರ ಮಾರ್ಗದ ಜಾಡುಹಿಡಿದು ನಮ್ಮ ಸಿಬ್ಬಂದಿ ಗುಂಡಿನ ಚಕಮಕಿಯಲ್ಲಿ ತೊಡಗಿದರು. ಭಯೋತ್ಪಾದಕರು ಕೆಲ ಶಸ್ತ್ರಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಮ್ಯಾನ್ಮಾರ್ ಗಡಿಯೊಳಕ್ಕೆ ಓಡಿದ್ದಾರೆ. ಸೇನಾ ತುಕಡಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸೇನೆ ಘೋಷಿಸಿದೆ.

ಕಳೆದ ಜೂನ್‌ನಲ್ಲಿ 18 ಮಂದಿ ಸೇನಾ ಸಿಬ್ಬಂದಿಯನ್ನು ಭಯೋತ್ಪಾದಕರು ಹತ್ಯೆ ಮಾಡಿದ ಬಳಿಕ ಭಾರತದ ವಿಶೇಷ ಪಡೆ ವಿಶೇಷ ಭಯೋತ್ಪಾದಕ ನಿಗ್ರಹ ದಾಳಿಯನ್ನು ಮಯನ್ಮಾರ್  ಗಡಿಯಲ್ಲಿ ಮಾಡುತ್ತಿದೆ. ಎನ್‌ಎಸ್‌ಸಿಎನ್(ಕೆ) ಹಾಗೂ ಕಂಗ್ಲೀ ಯವೋಲ್ ಕನ್ನಾ ಲೂಪ್ (ಕೆವೈಕೆಲ್) ಗುಂಪಿನ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಅಸ್ಸಾಂ ರೈಫಲ್ಸ್‌ನ ಯೋಧರು ಹಾಗೂ ಎನ್‌ಎಸ್‌ಸಿಎನ್(ಕೆ) ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದು  ಮಯನ್ಮಾರ್ ಜತೆಗಿನ ಪೂರ್ವದ ಗಡಿಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News