ವಿಮಾನ ಹಾರಾಟದಲ್ಲಿರುವಾಗಲೇ ಪೈಲಟ್‌ಗಳ ಸೆಲ್ಫಿ!

Update: 2016-08-20 03:05 GMT

ಹೊಸದಿಲ್ಲಿ, ಆ.20: ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಿ ವಿಮಾನ ಹಾರಾಟದಲ್ಲಿರುವಾಗಲೇ ವಿಮಾನದ ಕಾಕ್‌ಪಿಟ್‌ನಲ್ಲಿ ಸೆಲ್ಫಿ ತೆಗೆದ ಆರೋಪದ ಮೇರೆಗೆ ಇಂಡಿಗೊ ವಿಮಾನದ ಮೂವರು ಪೈಲಟ್‌ಗಳನ್ನು ಒಂದು ವಾರ ಕಾಲ ಕರ್ತವ್ಯದಿಂದ ಹೊರಗಿಟ್ಟು ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ ಆದೇಶ ಹೊರಡಿಸಿದ್ದಾರೆ.

ಮೂವರೂ ಪೈಲಟ್‌ಗಳಿಗೆ ಎಚ್ಚರಿಕೆ ನೀಡಿ, ವಿಮಾನ ಹಾರಾಟದಲ್ಲಿರುವಾಗ ಕಾಕ್‌ಪಿಟ್‌ನಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇಧಿಸಿ, ಆದೇಶ ಹೊರಡಿಸಿದೆ. ಸುಮಾರು ಒಂದೂವರೆ ವರ್ಷ ಮೊದಲು ಸೆಲ್ಫಿ ತೆಗೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರ ಕಾಲ ಪೈಲಟ್‌ಗಳನ್ನು ಕರ್ತವ್ಯದಿಂದ ಹೊರಗಿಡಲಾಗಿದೆ ಎಂದು ಇಂಡಿಗೊ ಹೇಳಿದೆ.

"ಇದು ಇಂಥ ಮೊದಲ ಪ್ರಕರಣವಲ್ಲ. ವಿಮಾನ ಹಾರಾಟದಲ್ಲಿರುವಾಗಲೇ ಪೈಲಟ್‌ಗಳು ತಮ್ಮ ಸೀಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಚಿತ್ರಗಳು ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ" ಎಂದು ಮೂಲಗಳು ಹೇಳಿವೆ.

ಅಮೆರಿಕದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಷನ್ ಈಗಾಗಲೇ ವಾಣಿಜ್ಯ ಏರ್‌ಲೈನ್ಸ್ ಸಿಬ್ಬಂದಿ, ಕರ್ತವ್ಯದಲ್ಲಿರುವಾಗ ವೈಯಕ್ತಿಕ ಉದ್ದೇಶಕ್ಕೆ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News