ಕಾಸರಗೋಡು: ಗಣನೀಯವಾಗಿ ಕಡಿಮೆಯಾಗುತ್ತಿದೆ ಕಪ್ಪೆಚಿಪ್ಪು ಪ್ರಮಾಣ
ಕಾಸರಗೋಡು, ಆ.20: ಜಿಲ್ಲೆಯಲ್ಲಿನ ಹಿನ್ನೀರು ಮತ್ತು ಹೊಳೆಗಳಲ್ಲಿನ ಕಪ್ಪೆಚಿಪ್ಪು(ಮರುವಾಯಿ) ಅಪೂರ್ವ ರೋಗಕ್ಕೆ ತುತ್ತಾಗಿದ್ದು, ಇವುಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಕಪ್ಪೆ ಚಿಪ್ಪು ಉದ್ಯಮವನ್ನೇ ನಂಬಿದ್ದ ಸಾವಿರಾರು ಕುಟುಂಬಗಳು ಅತಂತ್ರ ಪರಿಸ್ಥಿತಿಯಲ್ಲಿವೆ. ಕೀಟನಾಶಕ ಅಂಶ ನೀರು ಮತ್ತು ಮಣ್ಣಿಗೆ ಸೇರುತ್ತಿರುವುದು ಕಪ್ಪೆಚಿಪ್ಪುಗಳ ಅವನತಿಗೆ ಕಾರಣ ಎನ್ನಲಾಗಿದೆ.
ಜಿಲ್ಲೆಯ ತ್ರಿಕ್ಕರಿಪುರ, ನೀಲೇಶ್ವರ ಪ್ರದೇಶ ವ್ಯಾಪ್ತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಪ್ಪೆಚಿಪ್ಪು ಉದ್ಯಮ ಕಂಡುಬರುತ್ತದೆ. ಇಲ್ಲಿ ಹೆಕ್ಕಲಾಗುವ ಕಪ್ಪೆಚಿಪ್ಪುಗಳನ್ನು ಸಂಸ್ಕರಿಸಿ ಮಾಂಸವನ್ನು ಬೆಂಗಳೂರು, ಚೆನ್ನೈ, ಮುಂಬೈ ಮೊದಲಾದೆಡೆಗಳಿಗೆ ರವಾನೆ ಮಾಡಲಾಗುತ್ತದೆ. ಚಿಪ್ಪನ್ನು ಸುಣ್ಣ ತಯಾರಿಯಲ್ಲಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಕಪ್ಪೆಚಿಪ್ಪುಗಳ ಇಳುವರಿ ಉತ್ತಮವಾಗಿರುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಕಪ್ಪೆಚಿಪ್ಪು ಪ್ರಮಾಣ ಗಣನೀಯವಾಗಿ ಕುಸಿದಿದೆ. ಈ ಕುರಿತು ತಂಡವೊಂದು ನಡೆಸಿದ ಅಧ್ಯಯನದಲ್ಲಿ ನೀರಿನಲ್ಲಿ ಕೀಟನಾಶಕದ ಅಂಶಗಳು ಸೇರಿಕೊಂಡಿರುವುದು ಪತ್ತೆಯಾಗಿದೆ. ಇದರಿಂದಾಗಿ ಕಪ್ಪೆಚಿಪ್ಪುಮೇಲೆತ್ತುವ ಕಾರ್ಮಿಕರು ಮತ್ತು ಸಂಸ್ಕರಣಾ ಘಟಕದ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಕಪ್ಪೆಚಿಪ್ಪುಬೆಳೆದು ಸೆಪ್ಟಂಬರ್ ವೇಳೆಗೆ ಮೇಲಕ್ಕೆತ್ತಲಾಗುತ್ತಿದೆ. ಆದರೆ ಈ ಬಾರಿ ಎರಡು ತಿಂಗಳ ಮೊದಲೇ ಕಪ್ಪೆಚಿಪ್ಪುಗಳು ಗೋಚರಿಸತೊಡಗಿದ್ದು, ಮೇಲಕ್ಕೆತ್ತಲು ಕಾರ್ಮಿಕರು ಹೊಳೆಗೆ ಇಳಿದಾಗ ರೋಗಕ್ಕೆ ತುತ್ತಾಗಿರುವುದು ಕಂಡುಬಂದಿದೆ. ಬಹುತೇಕ ಚಿಪ್ಪುಗಳು ಒಡೆದು ನೀರಿನ ತಳಭಾಗ ತಲುಪಿದೆ. ಇದೆ ಸ್ಥಿತಿ ಮುಂದುವರಿದಲ್ಲಿ ಮುಂದಿನ ಕೆಲ ವರ್ಷಗಳಲ್ಲೇ ಕಪ್ಪೆಚಿಪ್ಪು ವಂಶ ನಾಶವಾಗಲಿದೆ ಎನ್ನುವ ಆತಂಕ ಕಾರ್ಮಿಕರನ್ನು ಕಾಡುತ್ತಿದೆ.