ಮಕ್ಕಳ ರಕ್ಷಣೆಗೆ ಮೀನುಗಾರ ಸಂಘಟನೆಗಳು ಬದ್ಧ: ವನಿತಾ
ಮಲ್ಪೆ, ಆ.19: ಬಾಲಕಾರ್ಮಿಕರಿಗೆ ಮಲ್ಪೆ ಬಂದರಿನಲ್ಲಿ ಅವಕಾಶವಿಲ್ಲ. ಇಲ್ಲಿ ಯಾರೂ ಮಕ್ಕಳನ್ನು ದುಡಿಸುವುದಿಲ್ಲ. ಮೀನುಗಳನ್ನು ಹೆಕ್ಕಿ ಮಾರಾಟ ಮಾಡಲು ಇಲ್ಲಿಗೆ ಮಕ್ಕಳು ಬರುತ್ತಾರೆ ಯೇ ಹೊರತು ಇಲ್ಲಿ ಮಕ್ಕಳಿಗೆ ದುಡಿಯಲು ಅವಕಾಶವಿಲ್ಲ ಎಂದು ಮಲ್ಪೆಯ ಮೀನುಗಾರ ಮುಖಂಡರು ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವ ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ನಡೆದ ‘ಶಾಲೆ ಕಡೆ ನನ್ನ ನಡೆ’ ಮಾಹಿತಿ ಕಾರ್ಯಾಗಾರದಲ್ಲಿ ಮಲ್ಪೆಮೀನುಗಾರರ ಸಂಘದ ಅಧ್ಯಕ್ಷ ಹೆರಿಯಣ್ಣ ಟಿ.ಕಿದಿಯೂರು ಈ ಮಾಹಿತಿ ನೀಡಿದರು. ‘ಮಕ್ಕಳು ದೇಶದ ಭವಿಷ್ಯ’ ಎಂಬ ಅರಿವು ನಮಗಿದೆ.ಆದರೆ ಹಣದ ಆಸೆಯಿಂದ ವಲಸೆ ಬಂದವರ ಮಕ್ಕಳು ಮಾಡುವ ಕೆಲಸವನ್ನು ತಡೆಯಲು, ಮಕ್ಕಳು ಈ ಪ್ರದೇಶಕ್ಕೆ ಸುಳಿಯದಂತೆ ಕಠಿಣ ಕಾನೂನು ಕ್ರಮವನ್ನು ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ. ಮೀನುಗಾರಿಕೆ, ಶಿಕ್ಷಣ, ಕಾರ್ಮಿಕ, ಪೊಲೀಸ್ ಇಲಾಖೆ ಹಾಗೂ ಮೀನುಗಾರರ ಸಂಘಟನೆಗಳ ಸಹಕಾರದಿಂದ ನಿರಂತರವಾಗಿ ಕಾರ್ಯಾಚರಣೆ ನಡೆದರೆ ಮಾತ್ರ ಮಕ್ಕಳು ಈ ಪ್ರದೇಶ ವ್ಯಾಪ್ತಿಯಲ್ಲಿ ಸುಳಿಯದಂತೆ ತಡೆಯಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು. ಎಲ್ಲಾ ಮಕ್ಕಳು ಶಾಲೆಗೆ ತೆರಳಬೇಕು.ವಿದ್ಯಾರ್ಜನೆ ಮಾಡಬೇಕೆಂದು ನಮ್ಮೆಲ್ಲರ ಬಯಕೆಯಾಗಿದೆ.ಮೀನುಗಾರಿಕಾ ಬಂದರಿಗೆ ಬಂದು ಮೀನು ಹೆಕ್ಕಿ ಮಾರುವ ಮಕ್ಕಳ ಕಾರ್ಯಚಟುವಟಿಕೆ ತಡೆಯಲು ಮೀನುಗಾರರ ವತಿಯಿಂದ ಪೂರ್ಣ ಸಹಕಾರವನ್ನು ನೀಡುವುದಾಗಿ ಅವರು ವನಿತಾ ತೊರವಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಸಿವಿಲ್ ನ್ಯಾಯಾಧೀಶೆ ಲತಾ, ಕಾರ್ಮಿಕ ಅಧಿಕಾರಿ ಎನ್.ಪಿ ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ಮೀನು ಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮೀನುಗಾರ ಮುಖಂಡರಾದ ಗುಂಡು ಅಮೀನ್, ಕಿಶೋರ್ ಪಡುಕೆರೆ, ರಮೇಶ್ ಕೋಟ್ಯಾನ್, ದಯಾನಂದ ಕೆ.ಸುವರ್ಣ, ರವಿ ಸುವರ್ಣ, ಜನಾರ್ದನ್ ತಿಂಗಳಾಯ, ನಾರಾಯಣ ಕರ್ಕೆರಾ, ಗೋಪಾಲ್ ಮೆಂಡನ್ ಉಪಸ್ಥಿತರಿದ್ದರು.