×
Ad

ಶ್ರೀಮಂತರಿಂದ ಕುಮ್ಕಿ ಭೂಮಿ ವಶಪಡಿಸುವ ಬಗ್ಗೆ ವಿಶೇಷ ಸಭೆ: ಸಚಿವ ರೈ

Update: 2016-08-20 13:31 IST

ಮಂಗಳೂರು,ಆ.20: ಮಿತಿಗಿಂತ ಜಾಸ್ತಿ ಕುಮ್ಕಿ ಜಮೀನನ್ನು ಹೊಂದಿರುವ ಶ್ರೀಮಂತರಿಂದ ವಶಪಡಿಸಿಕೊಂಡು ಅದನ್ನು ಜಮೀನು ರಹಿತ ಹಾಗೂ ನಿವೃತ್ತ ಸೈನಿಕರಿಗೆ ನೀಡುವ ಕುರಿತಂತೆ ಶೀಘ್ರದಲ್ಲೇ ವಿಶೇಷ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದಿವಂಗತ ಡಿ. ದೇವರಾಜ ಅರಸುರವರ ಜನ್ಮ ಶತಮಾಮೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಾಕಷ್ಟು ಭೂಮಿ ಹೊಂದಿರುವ ಶ್ರೀಮಂತರಲ್ಲಿ ಇಂದಿಗೂ ಕುಮ್ಕಿ ಹಕ್ಕಿಗಾಗಿ ನ್ಯಾಯಾಲಯಕ್ಕೆ ಹೋಗುವ ಬಲಾಢ್ಯ ಶಕ್ತಿಗಳು ನಮ್ಮ ಜಿಲ್ಲೆಯಲ್ಲಿವೆ. ಇದರ ನಡುವೆಯೇ ಭೂಮಿ ಇಲ್ಲದ ದುರ್ಬಲ ವರ್ಗದವರೂ ಇದ್ದು, ಆ ವರ್ಗಗಳಿಗೆ ಶಕ್ತಿ ನೀಡುವ ನಿಟ್ಟಿನಲ್ಲಿ ಶ್ರೀಮಂತರ ಬಳಿ ಇರುವ ಕುಮ್ಕಿ ಹಕ್ಕನ್ನು ವಶಪಡಿಸಿಕೊಂಡು ಅದನ್ನು ಭೂ ರಹಿತರಿಗೆ ಹಂಚಬೇಕು ಎಂದು ಜಿಲ್ಲಾಧಿಕಾರಿಗೆ ಅವರು ಸೂಚನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಸೂದೆ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದವರು ದೇವರಾಜ ಅರಸುರವರು. ಈ ಕಾನೂನಿನಿಂದ ಅತೀ ಹೆಚ್ಚು ಭೂಮಿಯನ್ನು ಬಡ ಕುಟುಂಬಗಳು ಪಡೆದ ಜಿಲ್ಲೆಯೂ ದಕ್ಷಿಣ ಕನ್ನಡ. ಒಟ್ಟಿನಲ್ಲಿ ಜೀತ ಪದ್ಧತಿಯಿಂದ ಸ್ವಾಭಿಮಾನದ ಬದುಕಿಗೆ ಕಾರಣವಾದ ಅರಸು ಎಂದಿಗೂ ಮರೆಯುವಂತಿಲ್ಲ. ಹಾಗಿದ್ದರೂ ಗಾಂಧೀಜಿ, ಅರಸು, ನೆಹರೂ ಸೇರಿದಂತೆ ದೇಶದಲ್ಲಿ ಸ್ವಾಭಿಮಾನದ ಬದುಕಿಗೆ ಪ್ರೇರಣೆ ನೀಡಿದವರನ್ನು ತುಚ್ಛವಾಗಿ ಕಾಣುವ, ನಿಂದಿಸುವ, ವಿರೋಧಿಸುವ ವರ್ಗವೂ ಇದೆ. ಇತಿಹಾಸವನ್ನು ತಿರುಚುವ, ಸುಳ್ಳಾಗಿಸುವ ಸಂಚೂ ನಡೆಯುತ್ತಿದೆ. ಈ ಬಗ್ಗೆ ಸಮಾಜ ಎಚ್ಚರವಾಗಿರಬೇಕು ಎಂದು ಅವರು ಹೇಳಿದರು.

ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ದಿವಂಗತ ದೇವರಾಜ ಅರಸು ಅವರ ಚಿಂತನೆ, ಮಾರ್ಗದರ್ಶನ ಎಂದಿಗೂ ಪ್ರಸ್ತುತ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ವಸತಿ ನಿಲಯಗಳಲ್ಲಿದ್ದು, ಶಿಕ್ಷಣ ಪಡೆಯುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ವೇದಿಕೆಯಲ್ಲಿ ಶಾಸಕಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಶಾಸಕ ಜೆ.ಆರ್. ಲೋಬೊ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ, ಮುಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಣ್ಣ ಎಚ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News