×
Ad

ವಿದೇಶಿ ಮಹಿಳೆಯೊಂದಿಗೆ ಕೆಟ್ಟ ವರ್ತನೆ: ಉಬರ್ ಚಾಲಕನ ಬಂಧನ

Update: 2016-08-20 16:28 IST

ಮುಂಬೈ,ಆಗಸ್ಟ್ 20: ಇಟಲಿಯ ಮಹಿಳೆಯೊಬ್ಬರೊಂದಿಗೆ ಕೆಟ್ಟದಾಗಿ ವರ್ತಿಸಿದ ಉಬರ್ ಟ್ಯಾಕ್ಸಿ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಘಟನೆಯ ಕುರಿತು ಮಹಿಳೆಯ ಗೆಳೆಯ ಫೇಸ್‌ಬುಕ್‌ನಲ್ಲಿ ಬರೆದ ನಂತರ ಘಟನೆ ವಿವಾದಾಸ್ಪದವಾಗಿತ್ತು ಎಂದು ತಿಳಿದುಬಂದಿದೆ. ಮುಂಬೈ ಪೊಲೀಸರು ವಿದೇಶಿ ಮಹಿಳೆಯನ್ನು ಅವಮಾನಿಸಿದ ಆರೋಪದಲ್ಲಿ ಶೆಹಬಾರ್ ಎಂಬಾತನನ್ನು ಬಂಧಿಸಿದ್ದು, ಮಹಿಳೆ ಇಟಲಿಗೆ ಮರಳಿದ ಬಳಿಕ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ಇಟಲಿ ಪೊಲೀಸರು ಪ್ರಕರಣವನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು ಎಂದು ವರದಿ ತಿಳಿಸಿದೆ.

ಗುರುವಾರ ರಾತ್ರಿ ಸಾಂತಾಕ್ರೂರ್ಜಿಂದ ಅಂಧೇರಿಗೆ ಹೋಗಲು ಮಹಿಳೆ ಟ್ಯಾಕ್ಸಿಯನ್ನು ಗೊತ್ತುಮಾಡಿದ್ದರು. ಜುಹು ತಾರಾ ರಸ್ತೆಯಲ್ಲಿ ಮಹಿಳೆಯೊಂದಿಗೆ ಚಾಲಕ ಕೆಟ್ಟದಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಪ್ರಯಾಣಿಸಲು ಕಾರನ್ನು ಕರೆಯಿಸಿಕೊಂಡ ಮೊದಲಲ್ಲಿ ಒಳ್ಳೆಯದಾಗಿ ವರ್ತಿಸಿದರೂ ನಂತರ ತನ್ನ ನೈಜ ಮುಖವನ್ನು ಪ್ರದರ್ಶಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಕಾರಿನ ಎದುರಿನ ಸೀಟಲ್ಲಿ ಕುಳಿತುಕೊಳ್ಳುವಂತೆ ಚಾಲಕ ಮಹಿಳೆಯನ್ನು ವಿನಂತಿಸಿಕೊಂಡಿದ್ದ. ಆದರೆ ಮಹಿಳೆ ಅದಕ್ಕೊಪ್ಪದೆ ಹಿಂದಿನ ಸೀಟಿನಲ್ಲಿ ಕೂತಿದ್ದರು. ನಂತರ ಹಿಂಬದಿಯ ಗ್ಲಾಸನ್ನು ಶುಚಿಗೊಳಿಸುವ ನೆಪದಲ್ಲಿ ಮಹಿಳೆಯ ಮೈಮೇಲೆ ಚಾಲಕ ಕೈಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಭಯಭೀತಳಾದ ಮಹಿಳೆ ಕಾರಿನಿಂದ ಇಳಿದು ಪಾರಾಗಿದ್ದರು ಎನ್ನಲಾಗಿದೆ. ಇದೇ ವೇಳೆ ಶಹ್‌ಬಾರ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಹಾಗೂ ಆತನ ಎಲ್ಲ ವಿವರಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಉಬರ್ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News