×
Ad

ಇಡಬೆಟ್ಟು: ಸರಕಾರಿ ಶಾಲೆಯ ಶಿಕ್ಷಕರ ವರ್ಗಾವಣೆ ಖಂಡಿಸಿ ತರಗತಿ ಬಹಿಷ್ಕಾರ

Update: 2016-08-20 17:06 IST

ಪುತ್ತೂರು, ಆ.20: ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಇಡಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ವರ್ಗಾವಣೆ ವಿರೋಧಿಸಿ ತರಗತಿ ಬಹಿಷ್ಕರಿಸಿದ ಮತ್ತು ವಿದ್ಯಾರ್ಥಿಗಳ ಪೋಷಕರು ಶಾಲೆಯ ಗೇಟಿನ ಎದುರು ದಿನವಿಡೀ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. 

ಶಾಲೆಗೆ ಶಿಕ್ಷಕರ ವ್ಯವಸ್ಥೆಯಾಗುವ ತನಕ ನಾವು ಪ್ರತಿಭಟನೆ ನಡೆಸುತ್ತೇವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಎಚ್ಚರಿಸಿದರು. ಶುಕ್ರವಾರ ಬೆಳಗ್ಗಿನ ವೇಳೆಯೇ ಮಕ್ಕಳೊಂದಿಗೆ ಆಗಮಿಸಿ ಶಾಲೆಯ ಮುಂದೆ ಜಮಾಯಿಸಿದ್ದ ವಿದ್ಯಾರ್ಥಿಗಳ ಪೋಷಕರು 9 ಗಂಟೆಯ ವೇಳೆಗೆ ಶಾಲೆಯ ಗೇಟಿನ ಎದುರು ಪ್ರತಿಭಟನೆ ಆರಂಭಿಸಿದರು. ಆದರೆ ಮಧ್ಯಾಹ್ನ ತನಕವೂ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡದೇ ಇದ್ದುದು ಪೋಷಕರ ಆಕ್ರೋಶಕ್ಕೆ ಕಾರಣವಾಯಿತು. ಶಾಲೆಗೆ ಒಬ್ಬರು ಶಿಕ್ಷಕರನ್ನು ತಕ್ಷಣ ಇಲ್ಲಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ ಪೋಷಕರು ಇದು ಒಂದು ದಿನದ ಪ್ರತಿಭಟನೆ ಅಲ್ಲ , ಶಿಕ್ಷಕರ ವ್ಯವಸ್ಥೆ ಮಾಡುವ ತನಕ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡಬೆಟ್ಟು ಸರಕಾರಿ ಶಾಲೆಯಲ್ಲಿ ಒಂದರಿಂದ ಐದನೆ ತರಗತಿವರೆಗೆ ತರಗತಿಗಳಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳಿವೆ. ದಾನಿಗಳ ನೆರವಿನಿಂದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಸುವ್ಯವಸ್ಥಿತ ಈ ಶಾಲೆಗೆ ಈಗ ಹೆಚ್ಚುವರಿ ಶಿಕ್ಷಕರು ಎಂಬ ಪರಿಕಲ್ಪನೆ ಮುಂದಿಟ್ಟು ಅನ್ಯಾಯ ಮಾಡಲಾಗಿದೆ .ಕಳೆದ ಸಾಲಿನಲ್ಲಿ ಈ ಶಾಲೆಯಲ್ಲಿ 37 ಮಕ್ಕಳಿದ್ದರು. ಪ್ರಸ್ತುತ ಮಕ್ಕಳ ಸಂಖ್ಯೆ 41ಕ್ಕೆ ಏರಿದೆ. ಕಳೆದ ಸಾಲಿನಲ್ಲಿ ಶಾಲೆಯಲ್ಲಿ ಪ್ರದೀಪ್ ಮತ್ತು ದಿನೇಶ್ ಎಂಬ ಇಬ್ಬರು ಶಿಕ್ಷಕರಿದ್ದರು. ಈ ನಡುವೆ ಅಕ್ಟೋಬರ್ ಹೊತ್ತಿಗೆ ಇಲ್ಲಿಗೆ ನೀನಾ ಕುವೆಲ್ಲೋ ಎಂಬ ಶಿಕ್ಷಕಿ ವರ್ಗಾವಣೆಯಾಗಿ ಬಂದರು. ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿಗೆ ಇಬ್ಬರು ಶಿಕ್ಷಕರು ಸಾಕಾಗುತ್ತಿತ್ತು. ಆದರೂ ಇಲಾಖೆ ಒಬ್ಬರು ಶಿಕ್ಷಕಿಯನ್ನು ಹೆಚ್ಚುವರಿಯಾಗಿ ಕೊಟ್ಟಿತು. ಇಲಾಖೆ ಶಾಲೆಗೆ ಹೆಚ್ಚುವರಿಯಾಗಿ ಒಬ್ಬರು ಶಿಕ್ಷಕರನ್ನು ಕೊಡದೆೆ ಇರುತ್ತಿದ್ದರೆ ಈ ಬಾರಿ ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ಈ ಶಾಲೆ ಗುರುತಿಸಿಕೊಳ್ಳುತ್ತಿರಲಿಲ್ಲ ಎಂದು ಪೋಷಕರು ಆರೋಪಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ನಾಸಿರ್ ಇಡಬೆಟ್ಟು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹಿರಿಯ ವಿದ್ಯಾರ್ಥಿ ಮುಖಂಡೆ ಮಾಲತಿ, ಪೋಷಕರಾದ ಹೇಮಾವತಿ, ಪುಷ್ಪಾ, ಕುಸುಮಾ, ಪವಿತ್ರ, ಕುಸುಮಾ ಕರೆಜ್ಜ, ಶೀನ, ಮೀನಾಕ್ಷಿ, ಆಮೀನಾ, ನೆಬಿಸಾ, ದಿಲ್‌ಶಾದ್, ಶಬನಾ, ಸುಂದರಿ, ಕಮಲ, ಸುರೇಶ್, ಮುಸ್ತಫಾ, ಯಾಹ್ಯಾ, ರಿಯಾಝ್, ಚೆನ್ನಕೇಶವ, ಅಶೋಕ್, ಉಮೇಶ್, ಕೃಷ್ಣ ಮಣಿಯಾಣಿ, ಈಶ್ವರ ಕಟ್ಟದಬೈಲ್, ಅಹ್ಮದ್, ಇಲಿಯಾಸ್, ಶೇಖರ, ಹರಿಣಾಕ್ಷಿ, ಧನು, ರಂಜಿತ್, ಬಲ್ಕೀಸ್, ಶ್ರೀಧರ ಮಣಿಯಾಣಿ, ಸುಂದರಿ, ಲೀಲಾವತಿ, ಪ್ರಶಾಂತ್ ಮತ್ತಿತರರು ಪ್ರತಿಟನೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News