×
Ad

ಕೆಂಜೂರು ಪ್ರವೀಣ್ ಪೂಜಾರಿ ಪ್ರಕರಣದ ಸಮಗ್ರ ತನಿಖೆಗೆ ಆಪ್ ಆಗ್ರಹ

Update: 2016-08-20 17:21 IST

ಮಂಗಳೂರು,ಆ.20: ಕೆಂಜೂರಿನಲ್ಲಿ ಹತ್ಯೆಯಾದ ಪ್ರವೀಣ್ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಜಿಲ್ಲಾ ಘಟಕ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ರೋಹನ್ ಸಿರಿ, ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣವನ್ನು ಪಕ್ಷ ಖಂಡಿಸಿರುವುದಲ್ಲದೆ, ಈಗಾಗಲೇ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಕೆಲಸ ಮಾಡಿದ್ದೇವೆ ಎಂದರು. ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತರು ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಕಾಂಗ್ರೆಸ್‌ನ ಹಿರಿಯ ನಾಯಕ, ಪ್ರತಿ ವಿಷಯಕ್ಕೂ ಪ್ರತಿಕ್ರಿಯಿಸುವ ಜನಾರ್ದನ ಪೂಜಾರಿಯವರು ಇಲ್ಲಿವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ಟೀಕಿಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಗೋರಕ್ಷಕ ಹೆಸರಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ದೊಡ್ಡ ದೊಡ್ಡ ಬಿಲ್ಡರ್ ಹಾಗೂ ಅನಿವಾಸಿ ಭಾರತೀಯರಿಂದ ಲಕ್ಷಾಂತರ ರು. ದೇಣಿಗೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ ಅವರು, ಪ್ರವೀಣ್ ಹತ್ಯೆಯ ಕುರಿತು ನಾವು ಈಗಾಗಲೇ ಹಲವಾರು ಜನರನ್ನು ಸಂಪರ್ಕಿಸಿದ್ದು, ಇದೊಂದು ಯೋಜಿತ ಕೊಲೆ ಎನ್ನುವುದು ಮೇಲ್ನೋಟಕ್ಕೆ ತಿಳಿದಿದೆ. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು.

ಪಕ್ಷದ ಪ್ರಮುಖರಾದ ರಾಜೇಂದ್ರ ಕುಮಾರ್, ರಾಮದಾಸ್, ರಿಚಾರ್ಡ್ ಫೆರ್ನಾಂಡಿಸ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News