ದೇಶದ ಅಖಂಡತೆಯಲ್ಲಿ ಯಾರೂ ಅನ್ಯರಲ್ಲ : ರುದ್ರಪ್ಪ ಲಮಾಣಿ

Update: 2016-08-20 12:03 GMT

ಕಾಸರಗೋಡು, ಆ.20: ಭಾಷಾವಾರು ಆಧಾರದಲ್ಲಿ ರಾಜ್ಯಗಳು ಹಂಚಿಕೆಯಾಗಿದ್ದರೂ, ಭಾರತೀಯರೆಲ್ಲ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿವಿಧತೆಯಲ್ಲೂ ಏಕತೆಯನ್ನು ಕಾಣುವವರು. ಪರಸ್ಪರ ಸ್ನೇಹ, ಪ್ರೀತಿ ಸೌಹಾರ್ದತೆಗಳು ನಮ್ಮನ್ನು ಒಂದುಗೂಡಿಸುತ್ತವೆಯೆಂದು ಕರ್ನಾಟಕ ಸರಕಾರದ ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಬದಿಯಡ್ಕ ಸಿರಿಗನ್ನಡ ಪುಸ್ತಕ ಮಳಿಗೆಯ ಮೂಲಕ ಶನಿವಾರ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ ವಾಚನಾಲಯ ಮತ್ತು ಗ್ರಂಥಾಲಯಗಳಿಗೆ ಕೊಡಮಾಡುವ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ತೆಂಗಿನ ಕೊಂಬು ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಆಡಳಿತಾತ್ಮಕ ಸೌಕರ್ಯಗಳಿಗಷ್ಟೆ ಭಾಷಾವಾರು ಪ್ರಾಂತ್ಯ ರಚನೆಗೆ ಆಸ್ಪದ ನೀಡಿದ್ದು, ಸಾಂಸ್ಕೃತಿಕ, ಸಾಮಾಜಿಕ ಮತ್ತು ಜೀವನಶೈಲಿಗಳಲ್ಲಿ ನಮ್ಮಲ್ಲಿ ನಿಕಟ ಸಂಬಂಧಗಳಿವೆ. ಆಧುನಿಕ ಬೆಳವಣಿಗೆಗಳಲ್ಲಿ ಇದು ಕುಂದದಿರಲಿ ಎಂದು ಅವರು ತಿಳಿಸಿದರು.

ಕರ್ನಾಟಕದಾದ್ಯಂತ ವಿಸ್ತರಿಸಿರುವ ಕೇರಳೀಯರಿಗೆ ಕರ್ನಾಟಕ ಸರಕಾರ ಮೂಲಸೌಕರ್ಯಗಳಿಗೆ ಕೊರತೆ ಮಾಡಿಲ್ಲ. ಕೇರಳೀಯರಿಗೆ ಬೆಂಗಳೂರಿನಲ್ಲಿ ಮಲೆಯಾಳಿ ಭವನ ನಿರ್ಮಾಣಕ್ಕೆ ಸರಕಾರ ರೂಪು ನೀಡುತ್ತಿದ್ದು, ಅದೇ ಮಾದರಿಯಲ್ಲಿ ಕೇರಳದ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ಸಹಿತ ಗಡಿ ಭಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೂ ಯೋಜನೆ ರೂಪಿಸುತ್ತಿದೆಯೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗರೆ ಜಯಪ್ರಕಾಶ್, ಕನ್ನಡ ಭಾಷೆ, ಜನರು ಇರುವಲ್ಲೆಲ್ಲ ವಿಸ್ತಾರವಾಗಿ ಬೆಳೆಯುತ್ತಿರುವ ಕನ್ನಡವನ್ನು ಉಳಿಸುವಲ್ಲಿ ಎಲ್ಲರೂ ಕ್ರಿಯಾತ್ಮಕ ಚಟುವಟಿಕೆಗಳಿಗೆ ಮುಂದಾಗಬೇಕೆಂದು ತಿಳಿಸಿದರು. ಗಡಿನಾಡಿನ ಕನ್ನಡಿಗರ ಸವಾಲುಗಳು, ಸಮಸ್ಯೆಗಳ ಬಗ್ಗೆ ಕರ್ನಾಟಕ ಕಳಕಳಿಯಿಂದಿದೆ. ಇಲ್ಲಿಯ ಕನ್ನಡಿಗರಿಗೆ ಸವಾಲುಗಳೆದುರಾದಾಗ ಸರಕಾರ ಸಮರ್ಪಕ ನೆರವು ನೀಡುತ್ತದೆಯೆಂದು ಭರವಸೆ ನೀಡಿದರು.

ಭಾರತದ ಭಾಷೆಗಳಿಗೆ ಪ್ರಸ್ತುತ ಎಲ್ಲೆಡೆ ಗಂಭೀರ ಸಮಸ್ಯೆಗಳಿವೆ. ಭಿನ್ನತೆಗಳನ್ನು ಮರೆತು ಸಮಸ್ಯೆಗಳ ನಿವಾರಣೆಗೆ ಚಿಂತಿಸಬೇಕಾದ ಸಂದರ್ಭ ಒದಗಿದೆಯೆಂದು ತಿಳಿಸಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ದಕ್ಷಿಣ ಭಾರತದ ದ್ರಾವಿಡ ವರ್ಗ ಭಾಷಾ ಪ್ರಬೇಧಗಳ ನಾಲ್ಕು ರಾಜ್ಯಗಳು ಒಂದಾಗಿ ಭಾಷೆ, ಸಂಸ್ಕೃತಿಗೆ ಬಂದೆರಗಿರುವ ಆಪತ್ತಿನ ಬಗ್ಗೆ ಸ್ಪಷ್ಟ ನೀತಿ ರೂಪಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಪಿ.ಬಿ ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ತಾಯಿಗೆ ಸಮಾನ. ಮಾತೆಯ ಮೇಲಿನ ಅಕ್ಕರೆ, ತುಡಿತಗಳಂತೆ ಭಾಷೆಯ ಮೇಲಿನ ಅಭಿಮಾನ ಬೆಳೆದಂತೆ ಉತ್ಕರ್ಷೆಗೆ ಕಾರಣವಾಗುತ್ತದೆಯೆಂದು ತಿಳಿಸಿದರು.

ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಘಟಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅಂಬುಜಾಕ್ಷನ್ ಕೆ., ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ., ಬ್ಲಾಕ್ ಪಂಚಾಯತ್ ಸದಸ್ಯ ಎಚ್.ಸತ್ಯಶಂಕರ ಭಟ್, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಭಟ್, ಹಿರಿಯ ಸಮಾಜ ಸೇವಕ ಯಜಮಾನ್ ಡಾ.ವರದರಾಜ ಪೈ ಬಂಟ್ವಾಳ,ಸಾಮಾಜಿಕ ಮುಖಂಡ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಸ್ವಾಗತಿಸಿ, ಸಿರಿಗನ್ನಡ ಪುಸ್ತಕ ಮಳಿಗೆಯ ಸಂಚಾಲಕ ಕೇಳು ಮಾಸ್ಟರ್ ಅಗಲ್ಪಾಡಿ ವಂದಿಸಿದರು. ಜಾನಪದ ಪರಿಷತ್ತು ಗಡಿನಾಡ ಘಟಕದ ಖಜಾಂಜಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News