ಮಂಗಳೂರು ವಿವಿಯಲ್ಲಿ ರಾಜಕೀಯ ಪ್ರೇರಿತ ಕಾರ್ಯಕ್ರಮಕ್ಕೆ ಅವಕಾಶ: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಖಂಡನೆ

Update: 2016-08-20 12:34 GMT

ಮಂಗಳೂರು,ಆ.20: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆ.21ರಂದು ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದ್ದು, ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಈ ಕ್ರಮವನ್ನು ಖಂಡಿಸುವುದಾಗಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಹೇಳಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ, ಯಾವುದೇ ರಾಜಕೀಯ ಪಕ್ಷಕ್ಕೆ ಒಳಪಡದ ತಮ್ಮ ವಿದ್ಯಾರ್ಥಿ ಸಂಘಟನೆ ಕಾರ್ಯಕ್ರಮವೊಂದಕ್ಕೆ ಮಂಗಳೂರು ವಿವಿ ಕಾಲೇಜಿನಲ್ಲಿ ಅವಕಾಶ ಕೋರಿದಾಗ ನಿರಾಕರಿಸಲಾಗಿದೆ ಎಂದರು.

ರಾಜಕೀಯ ಪಕ್ಷದ ರಾಷ್ಟ್ರಾಧ್ಯಕ್ಷರು ಭಾಗವಹಿಸುವ ಕಾರ್ಯಕ್ರಮಕ್ಕೆ ಅವಕಾಶ ನೀಡುವ ಮೂಲಕ ಶಿಕ್ಷಣ ಸಂಸ್ಥೆಯಲ್ಲಿ ರಾಜಕೀಯ ತರುವ ಪ್ರಯತ್ನ ಮಾಡುತ್ತಿರುವುದು ವಿಷಾದನೀಯ. ಈ ಬಗ್ಗೆ ಈಗಾಗಲೇ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರಿಗೆ ಪತ್ರ ಬರೆದು 24 ಗಂಟೆಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ ಎಂದು ಬೇಸರಿಸಿದರು.

ಕಾರ್ಯಕ್ರಮದ ಬಗ್ಗೆಯಾಗಲಿ, ಕಾರ್ಯಕ್ರಮ ನಡೆಸುವ ಸಂಘಟಕರ ಬಗ್ಗೆಯಾಗಲೀ ನಮ್ಮ ಆಕ್ಷೇಪವಿಲ್ಲ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರು ಭಾಗವಹಿಸುವುದಿದ್ದರೂ ಅದನ್ನು ಒಪ್ಪಬಹುದಿತ್ತು. ಆದರೆ ಪಕ್ಷದ ನಾಯಕರು ಭಾಗವಹಿಸುವ ಕಾರ್ಯಕ್ರಮಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಅನುಮತಿ ನೀಡಿರುವುದಕ್ಕೆ ತಮ್ಮ ವಿರೋಧವಿದೆ. ಸಂಸದ ನಳಿನ್ ಕುಮಾರ್ ಕಟೀಲು ಹೆಸರಿನಲ್ಲಿ ಸಭಾಂಗಣವನ್ನು ಪಡೆಯಲಾಗಿದೆ. ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವವರು ಕೂಡಾ ಪಕ್ಷಕ್ಕೆ ಸೀಮಿತವಾಗಿರುವವರು. ಮಾತ್ರವಲ್ಲದೆ, ಕಾರ್ಯಕ್ರಮದ ಕರಪತ್ರದಲ್ಲಿ, ಪಕ್ಷದ ಕಾರ್ಯಕರ್ತರೆಲ್ಲರೂ ಭಾಗವಹಿಸಬೇಕೆಂದು ತಿಳಿಸಲಾಗಿರುವುದರಿಂದ ಇದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂಬುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಪ್ರಜ್ವಲ್ ಪೂಜಾರಿ, ಮಾಜಿ ಅಧ್ಯಕ್ಷ ರಘುವೀರ್ ಸೂಟರ್‌ಪೇಟೆ, ಮಾಜಿ ನಾಯಕರಾದ ಮನ್‌ದೀಪ್, ರಾಜ್ಯ ಕಾರ್ಯದರ್ಶಿ ಶೈಲೇಶ್, ಮಾಜಿ ಕ್ರೀಡಾ ಕಾರ್ಯದರ್ಶಿ ಪ್ರತೀಕ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸರ್ಫಾನ್, ಜಿತೇಶ್ ದೇವಾಡಿಗ, ಸಂಜಿತ್, ಸುಜಿತ್, ದೀಕ್ಷಿತ್, ಸುವಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News