ಲೇಖಕರಿಗೆ ಸಾಮಾಜಿಕ ಬದ್ಧತೆಯಿರಬೇಕು : ನಾ.ಕಾರಂತ ಪೆರಾಜೆ

Update: 2016-08-20 12:21 GMT

ಪುತ್ತೂರು, ಆ.20: ಮಾಧ್ಯಮ ಸಮಾಜದ ಕಣ್ಣು. ಮಾಧ್ಯಮವು ಸಶಕ್ತವಾಗಿದ್ದಷ್ಟು ಸಮಾಜವು ಜಾಗೃತವಾಗುತ್ತದೆ. ಸಮಾಜಕ್ಕೆ ಉಪಯುಕ್ತವಾದ ಮಾಹಿತಿಯನ್ನು ಲೇಖನ ನೀಡಬೇಕು. ಲೇಖನಗಳು ದಾರಿ ತಪ್ಪಿಸುವಂತಿರಬಾರದು ಎಂದು ಪುತ್ತೂರಿನ ಅಡಿಕೆ ಪತ್ರಿಕೆಯ ಸಹ ಸಂಪಾದಕ ನಾ.ಕಾರಂತ ಪೆರಾಜೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕೋದ್ಯಮ ವಿಭಾಗದ ದಶಮಾನೋತ್ಸಮ ಆಚರಣೆಯ ಉದ್ಘಾಟನಾ ಸಮಾರಂಭ ಹಾಗೂ ರಾಜ್ಯಮಟ್ಟದ ಮಾಧ್ಯಮ ಗೋಷ್ಠಿಯಲ್ಲಿ ಭಾಗವಹಿಸಿ ಮಾಧ್ಯಮ ಮತ್ತು ಸಮಾಜ ಎಂಬ ವಿಷಯದ ಬಗೆಗೆ ಮಾತನಾಡಿದರು.

ಲೇಖನದಲ್ಲಿ ವಸ್ತುನಿಷ್ಠತೆಯಿರಬೇಕು. ಅಲ್ಲದೇ ಲೇಖನವು ಯಶೋಗಾಥೆಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಿರಬೇಕು. ಜತೆಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಮಾಹಿತಿಗಳೆರಡನ್ನೂ ಜನತೆಗೆ ವಿವರಿಸಬೇಕು. ಬರೆಯುವ ಧಾವಂತದಿಂದ ಲೇಖಕರು ತಪ್ಪುಗಳನ್ನೆಸಗಬಾರದು. ಲೇಖಕನಿಗೆ ತಾಳ್ಮೆ ಮುಖ್ಯ ಎಂದರು.

ಲೇಖಕರಿಗೆ ಸಾಮಾಜಿಕ ಬದ್ಧತೆಯಿರಬೇಕು. ಜನರಿಗೆ ಸಹಾಯವಾಗುವ ಲೇಖನಗಳನ್ನು ಬರೆಯಬೇಕು. ಬದುಕಿಗೆ ನೆರವಾಗುವ ಬರಹಗಳ ಅಗತ್ಯ ಸಮಾಜಕ್ಕಿದೆ. ಸಮಾಜಕ್ಕೆ ಹಿತಕಾರಿಯಾದ ವಿಚಾರಗಳನ್ನು ಜನತೆಗೆ ನೀಡಬೇಕು. ಬರೆಯುವ ಲೇಖನಗಳು ಭವಿಷ್ಯವನ್ನು ಎಚ್ಚರಿಸುವಂತಿರಬೇಕು. ಹೊಸತನಗಳ ಕಡೆಗೆ ಗಮನಕೊಡಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಉಪಸ್ಥಿತರಿದ್ದರು. ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥೆ ವಿದ್ಯಾ ಎಸ್. ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News