ಚೈಲ್ಡ್‌ಲೈನ್ ವತಿಯಿಂದ ಅತ್ತಾವರ ಸರಕಾರಿ ಶಾಲೆಯಲ್ಲಿ 'ತೆರೆದ ಮನೆ' ಕಾರ್ಯಕ್ರಮ

Update: 2016-08-20 13:54 GMT

ಮಂಗಳೂರು, ಆ. 20: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 'ತೆರೆದ ಮನೆ' ಎಂಬ ಕಾರ್ಯಕ್ರಮ ಬಾಬುಗುಡ್ಡೆ ಅತ್ತಾವರದ ದ.ಕ.ಜಿ.ಪ.ಕಿ.ಪ್ರಾ.ಶಾಲೆಯಲ್ಲಿ ಇಂದು ನಡೆಯಿತು.

ಮಕ್ಕಳು ಹಾಗೂ ಅತಿಥಿಗಳಿಂದ ಚೈಲ್ಡ್‌ಲೈನ್‌ನ-1098 ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಚೈಲ್ಡ್‌ಲೈನ್ ಮಂಗಳೂರು-1098 ಕೇಂದ್ರ ಸಂಯೋಜನಾಧಿಕಾರಿ ಸಂಪತ್ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಚೈಲ್ಡ್‌ಲೈನ್-1098ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು. ಚೈಲ್ಡ್‌ಲೈನ್-1098 ದಿನದ 24 ಗಂಟೆಯೂ ಕಾರ್ಯನಿರತವಾಗಿದೆ ಎಂದರು.

ಕುದ್ಮಲ್ ರಂಗರಾವ್ ಟ್ರಸ್ಟ್ (ರಿ) ಮತ್ತು ಅತ್ತಾವರದ ಬಬ್ಬುಸ್ವಾಮಿ ಕ್ಷೇತ್ರದ ಉಪಾಧ್ಯಕ್ಷ ಶ್ಯಾಮ ಕರ್ಕೆರಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಹೆತ್ತವರು ತಮ್ಮ ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡುವಂತೆ ಹೇಳಿದರಲ್ಲದೆ, ಗಂಡ-ಹೆಂಡತಿಯರು ತಮ್ಮ ಮಕ್ಕಳ ಸಮ್ಮುಖದಲ್ಲಿ ಗಲಾಟೆ ಮಾಡುವುದರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವ ಸಾಧ್ಯತೆ ಇದೆ. ಹಾಗಾಗಿ ತಂದೆ-ತಾಯಂದಿರು ತಮ್ಮ ಮಕ್ಕಳ ಮುಂದೆ ಸಮಧಾನದಿಂದ ಹಾಗೂ ಸಮಚಿತ್ತದಿಂದ ಇರುವಂತೆ ಕಿವಿಮಾತುಗಳನ್ನು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಜ್ಞಾನೇಶ್ವರಿ, ಪಾಂಡೇಶ್ವರ ಪೊಲೀಸ್ ಠಾಣೆಯ ಇಲಾಖಾಧಿಕಾರಿ ಮಂಜುಳಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಧ್ಯಾ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಾ, ರೇವತಿ ಹೊಸಬೆಟ್ಟು, ಎಸ್‌ಡಿಎಂಸಿ ಅಧ್ಯಕ್ಷ ಧರ್ನಪ್ಪಮತ್ತು ಸದಸ್ಯರು, ಚೈಲ್ಡ್‌ಲೈನ್ ಮಂಗಳೂರು-1098 ಇದರ ನಗರ ಸಂಯೋಜಕ ಯೋಗಿಶ್ ಮಲ್ಲಿಗೆಮಾಡು, ಶೀಲಾ, ದ.ಕ.ಜಿ.ಪ.ಕಿ.ಪ್ರಾ. ಶಾಲೆಯ ಶಿಕ್ಷಕಿ, ಚೈಲ್ಡ್ ಲೈನ್-1098 ತಂಡ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದ.ಕ.ಜಿ.ಪ.ಕಿ.ಪ್ರಾ. ಶಾಲೆ ಬಾಬುಗುಡ್ಡೆಯ ಮುಖ್ಯ ಶಿಕ್ಷಕಿ ಜೆಸಿಂತಾ ಸ್ವಾಗತಿಸಿದರು. ಬಾಬುಗುಡ್ಡೆ ಅಂಗನವಾಡಿ ಶಿಕ್ಷಕಿ ಸುಜಾತ ಶೆಟ್ಟಿ ವಂದಿಸಿದರು. ಚೈಲ್ಡ್‌ಲೈನ್ ಮಂಗಳೂರು-1098 ತಂಡ ಸದಸ್ಯೆ ಜಯಂತಿ ಕೋಕಳ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News