ಉಳ್ಳಾಲಕ್ಕೆ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಭೇಟಿ: ಪರಿಶೀಲನೆ
ಉಳ್ಳಾಲ, ಆ.20: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಣಿ ಅಬ್ಬಕ್ಕಳ ಬಲಿದಾನ ಸ್ಮರಣೆಯ ಕಾರ್ಯಕ್ರಮಕ್ಕೆ ಉಳ್ಳಾಲಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಶನಿವಾರ ಸಂಜೆ ಉಳ್ಳಾಲ ಮತ್ತು ಕೊಣಾಜೆ ವಿವಿ ಮಂಗಳಾ ಸಭಾಂಗಣಕ್ಕೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಅವರು, 70ನೆ ಸ್ವಾತಂತ್ರ ದಿನಾಚರಣೆಯನ್ನು ದೇಶಾದ್ಯಂತ ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಾದ್ಯಂತ ತಿರಂಗಾ ಯಾತ್ರೆಯನ್ನು ಕೈಗೊಂಡಿದ್ದು, ಹೋಬಳಿ ಮಟ್ಟದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಣೆಯನ್ನು ಹಮ್ಮಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉಳ್ಳಾಲಕ್ಕೆ ಆಗಮಿಸಿ ರಾಣಿ ಅಬ್ಬಕ್ಕಳ ಬಲಿದಾನ ಸ್ಮರಣಾರ್ಥ ಉಳ್ಳಾಲ ಕೇಂದ್ರದ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಗೈದು, ಬಳಿಕ ಕೊಣಾಜೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯುವ ತಿರಂಗಾ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವರು. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿರುವರು ಎಂದು ಹೇಳಿದರು.
ಕಾರ್ಯಕ್ರಮವು ಸಂಪೂರ್ಣವಾಗಿ ರಾಜಕೀಯ ರಹಿತವಾಗಿದ್ದು, ಈ ಸಮಾರಂಭದಲ್ಲಿ ಪಕ್ಷದ ಧ್ವಜವನ್ನು ಹಿಡಿಯದೆ, ಕೇವಲ ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸುವಂತಹ ಅಪ್ಪಟ ದೇಶಭಕ್ತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆ.9ರಂದು ದೇಶಾದ್ಯಂತ ತಿರಂಗಾ ಯಾತ್ರೆಗೆ ಚಾಲನೆ ನೀಡಿದ್ದು, ಎಲ್ಲೂ ಪಕ್ಷದ ಪರ ಪ್ರಚಾರ ನಡೆಸಿಲ್ಲ ಎಂದು ಹೇಳಿದರು.
ರಾಜ್ಯ ಬಿಜೆಪಿಯ ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ,ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಮಿತಾ ಶ್ಯಾಂ. ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಜತೆಗಿದ್ದರು.