ವಿಟ್ಲ: ಮನೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ
ಬಂಟ್ವಾಳ, ಆ.20: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ಮನೆಯ ಮುಂಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾರಣವನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಲ ಕಸಬಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೊಬ್ಬೆಕೇರಿ ಸೀಗೆಬಲ್ಲೆ ನಿವಾಸಿ ರಫೀಕ್ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದ್ದು, ಇವರು ಶುಕ್ರವಾರ ತಮ್ಮ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದು ಶನಿವಾರ ಮನೆಗೆ ವಾಪಸ್ ಬಂದಾಗ ಮನೆಯಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.
ಮನೆ ಮಂದಿ ಹೋಗಿರುವ ವಿಷಯ ತಿಳಿದ ಸ್ಥಳೀಯರಿಂದಲೇ ಕಳ್ಳತನ ನಡೆದಿಬೇಕು ಎಂದು ಆರೋಪಿಸಲಾಗಿದೆ. ಕಪಾಟಿನಲ್ಲಿದ್ದ ನೆಕ್ಲೇಸ್, ಬೆಂಡೋಲೆ, ಸರಗಳು ಸೇರಿದಂತೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ ಎಂದು ರಫೀಕ್ ವಿಟ್ಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.