×
Ad

ಡ್ರಗ್ಸ್, ಮಾದಕ ವಸ್ತುಗಳ ಬಗ್ಗೆ ನಿಗಾ ವಹಿಸಿ: ಅಧಿಕಾರಿಗಳಿಗೆ ಕೃಪಾ ಆಳ್ವ ಸೂಚನೆ

Update: 2016-08-20 20:40 IST

ಮಂಗಳೂರು, ಆ. 20: ರಾಜ್ಯದಲ್ಲಿ ಆತಂಕ ಮಟ್ಟದಲ್ಲಿ ಬೆಳೆದಿರುವ ಅಕ್ರಮ ಡ್ರಗ್ಸ್, ಮಾದಕ ವಸ್ತುಗಳ ದಂಧೆಯಿಂದ ಮುಕ್ತವಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಅಗತ್ಯವಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದ್ದಾರೆ.

ಶನಿವಾರ ನಗರದ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ‘ಡ್ರಗ್ಸ್ ವಿರೋಧಿ ಅಭಿಯಾನ’ ಸಂಬಂಧಿಸಿ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗೂಡಂಗಡಿಗಳು ಮಾತ್ರವಲ್ಲ, ಸಂಶಯಾಸ್ಪದ ಪಾರ್ಟಿ, ಹೊಟೇಲ್ ಮೇಲೂ ನಿಗಾ ವಹಿಸುವಂತೆ ಅವರು ಸೂಚನೆ ನೀಡಿದರು.

ಕಾಲೇಜು ಕ್ಯಾಂಪಸ್ ಸುತ್ತಮುತ್ತ ಡ್ರಗ್ಸ್, ಮಾದಕ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದರ ಮೂಲೋತ್ಪಾಟನೆ ಮಾಡಲು ಪೊಲೀಸ್, ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಿ, ಅಪರಾಧಗಳು ಕಂಡುಬಂದಲ್ಲಿ ಕೊಟ್ಪ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಡ್ರಗ್ಸ್ ಶಾಪ್‌ನಲ್ಲಿ ಮಾದಕ ವಸ್ತುಗಳು ಸಿಗುವಾಗ ಹಾಗೂ ನಿಯಮವನ್ನು ಗಾಳಿಗೆ ತೂರಿ ಮಾರಾಟ ಮಾಡುವ ಡ್ರಗ್ಸ್ ಶಾಪ್‌ಗಳ ಬಗ್ಗೆ ಯಾಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದ ಅವರು, ಈತನಕ ಎಷ್ಟು ಡ್ರಗ್ಸ್ ಶಾಪ್ ಅಮಾನತಿನಲ್ಲಿಟ್ಟಿದ್ದೀರಿ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಕ್ಕಳು, ಯುವಕರು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅನೈತಿಕ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಯುವ ಜನಾಂಗ ದಾರಿ ತಪ್ಪುತ್ತಿದೆ. ಡ್ರಗ್ಸ್ ವ್ಯಸನದಿಂದ ಮುಕ್ತಗೊಂಡ ಮಕ್ಕಳನ್ನು, ವ್ಯಕ್ತಿಗಳನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿಸಿ ಕಾರ್ಯಕ್ರಮ ನಡೆಸಿ ಎಂದರು. ಮಾದಕ ವ್ಯಸನಗಳ ವಿರುದ್ಧ ಜಾಗೃತ ಕಾರ್ಯಕ್ರಮ ಕೈಗೊಳ್ಳಿ ಎಂದರು.

ಡಿಸಿಪಿ ಶಾಂತರಾಜು ಮಾತನಾಡಿ, ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ ಫ್ರಿ ಮಂಗಳೂರು ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಾಲಾ ಕಾಲೇಜಿನ 100 ಮೀಟರ್ ವ್ಯಾಪ್ತಿಯಲ್ಲಿ ಗಾಂಜಾ, ಮಾದಕ ವಸ್ತುಗಳನ್ನು ಮಾರಾಟ ನಿಷೇಧಿಸಲಾಗಿದೆ. ಶಾಲಾ ಕಾಲೇಜುಗಳಲ್ಲೂ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಬಗ್ಗೆ ದೂರು ಬಂದ ಕಡೆ ದಾಳಿ ನಡೆಸಿ ಕ್ರಮಕೈಗೊಳ್ಳಲಾಗಿದೆ ಎಂದರು.

ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ ಕೊಟ್ಪ ಪ್ರಕರಣದಲ್ಲಿ ಇಳಿಕೆಯಾಗಿದೆ. ಅಕ್ರಮ ಗಾಂಜಾ, ಡ್ರಗ್ಸ್‌ಸೇರಿದಂತೆ ವಿವಿಧ ಪ್ರಕರಣದಲ್ಲಿ ಭಾಗಿಯಾದ 5 ಮಂದಿಗೆ ಗಡೀಪಾರು ಶಿಕ್ಷೆ ನೀಡಲಾಗಿದೆ. ಇದು ಮಾತ್ರವಲ್ಲದೆ ಶಾಲಾ ಕಾಲೇಜುಗಳಲ್ಲಿ ಅಭಿಯಾನ, ಜಾಗೃತಿ, ಜಾಥಾ ಕಾರ್ಯಕ್ರಮಗಳು ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಹೇಳಿದರು.

ಈ ಸಂದರ್ಭ ಪಡಿ ಸಂಸ್ಥೆಯ ರೆನ್ನಿ ಡಿಸೋಜ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ, ಎಸಿಪಿ ಉದಯ ನಾಯ್ಕೋ, ಡಿಎಚ್‌ಒ ರಾಮಕೃಷ್ಣ ರಾವ್ ಉಪಸ್ಥಿತರಿದ್ದರು. ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ್ ಪೂಜಾರಿ ಸ್ವಾಗತಿಸಿ, ಡಿಸಿಪಿ ಶಾಂತರಾಜು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News